ಬೆದ್ರೋಡಿಯಲ್ಲಿ ಕಂಟೈನರ್-ಜೀಪು ಢಿಕ್ಕಿ ಪ್ರಕರಣ: ಗಾಯಾಳು ಸುರೇಶ್ ನಿಧನ

Update: 2020-01-27 16:59 GMT
ಸುರೇಶ್

ಉಪ್ಪಿನಂಗಡಿ : ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಡಿ.29ರಂದು ಕಂಟೈನರ್ ಲಾರಿಯೊಂದು ಜೀಪಿಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನೆಲ್ಯಾಡಿ ಕಟ್ಟೆಮಜಲು ನಿವಾಸಿ ಸುರೇಶ್ (38)ಎಂಬವರು ಜ.26ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಅಪಘಾತದಲ್ಲಿ ಮೃತರಾದವರ ಸಂಖ್ಯೆ ಇದೀಗ ಮೂರಕ್ಕೇರಿದೆ.

ಮೂಲತಃ ಪುತ್ತೂರಿನ ಕೆಮ್ಮಾಯಿ ದಿ.ಬಾಬು ಎಂಬವರ ಪುತ್ರರಾದ ಸುರೇಶ್‍ರವರಿಗೆ ಕೌಕ್ರಾಡಿ ಗ್ರಾಮದ ಕಟ್ಟೆಮಜಲು ನಿವಾಸಿ ದೇವಕಿ ಎಂಬವರೊಂದಿಗೆ ವಿವಾಹವಾಗಿದ್ದು ವಿವಾಹದ ಬಳಿಕ ಸುರೇಶ್‍ರವರು ಪತ್ನಿ ಜೊತೆ ಕಟ್ಟೆಮಜಲುನಲ್ಲಿ ವಾಸವಾಗಿದ್ದು ಗಾರೆ ಕೆಲಸಕ್ಕೆ ಹೋಗುತ್ತಿದ್ದರು. ಜ.29ರಂದು ಸಂಬಂಧಿಕರೋರ್ವರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ನೆಲ್ಯಾಡಿಯಿಂದ ಜೀಪಿನಲ್ಲಿ ತೆರಳುತ್ತಿದ್ದ ವೇಳೆ ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಜೀಪಿಗೆ ಕಂಟೈನರ್ ಲಾರಿ ಢಿಕ್ಕಿಯಾಗಿತ್ತು.

ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಸುರೇಶ್‍ರವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿ ದ್ದರು. ಕಳೆದ 29 ದಿನಗಳಿಂದ ಸುರೇಶ್‍ರವರು ಐಸಿಯುನಲ್ಲೇ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆಗೆ ಸ್ಪಂದಿಸದೆ ಜ.26ರಂದು ಮೃತಪಟ್ಟಿದ್ದಾರೆ.

ಮೃತರ ಸಂಖ್ಯೆ 3ಕ್ಕೆ ಏರಿಕೆ: ಈ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಒಟ್ಟು 3ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಜೀಪು ಚಾಲಕ ನೆಲ್ಯಾಡಿಯ ಪುದುವೆಟ್ಟು ನಿವಾಸಿ ಅಬೂಬಕ್ಕರ್ ಸಿದ್ದೀಕ್ ಯಾನೆ ನಿರ್ಮಾ ಸಿದ್ದೀಕ್(46)ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನೋರ್ವ ಗಾಯಾಳು ಗೋಳಿತ್ತೊಟ್ಟು ನಿವಾಸಿ ಕೆ.ಎಸ್.ಅಬ್ದುಲ್ ಮಲಿಕ್(48)ಎಂಬವರು ಜ.26ರಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದೀಗ ಗಂಭೀರ ಗಾಯಗೊಂಡಿದ್ದ ಸುರೇಶ್‍ರವರು ಸಹ ಮೃತಪಟ್ಟಿದ್ದು ಮೃತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ಈ ದುರ್ಘಟನೆಯಲ್ಲಿ ಬಜತ್ತೂರು ನಿವಾಸಿ ಓಡಿಯಪ್ಪ, ಕೌಕ್ರಾಡಿಯ ರಾಜಾ, ಬಜತ್ತೂರಿನ ಪ್ರವೀಣ, ಪಂಜ ನಿವಾಸಿ ವಸಂತ, ರೆಖ್ಯ ನಿವಾಸಿ ಪೂವಪ್ಪ ಗೌಡ, ರಾಮಕುಂಜ ನಿವಾಸಿ ಗುರುರಾಜ್ ಎಂಬವರು ಗಾಯಗೊಂಡಿದ್ದು ಚೇತರಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News