ಸಿಎಎ ವಿರೋಧಿ ಪ್ರತಿಭಟನೆಗೆ ಪಾಪ್ಯುಲರ್ ಫ್ರಂಟ್‌ ಆರ್ಥಿಕ ನೆರವು ಆರೋಪ ನಿರಾಧಾರ: ಮುಹಮ್ಮದ್ ಅಲಿ ಜಿನ್ನಾ

Update: 2020-01-27 18:14 GMT

ಬೆಂಗಳೂರು : ಸಿಎಎ ವಿರೋಧಿ ಪ್ರತಿಭಟನೆಗೆ ಪಾಪ್ಯುಲರ್ ಫ್ರಂಟ್ ಹಣಕಾಸಿನ ನೆರವು ನೀಡಿದೆ ಎಂದು ವಿವಿಧ ಸುದ್ದಿ ಚಾನೆಲ್ ಗಳಲ್ಲಿ ನಿರಾಧಾರ ವರದಿಗಳು ಪ್ರಸಾರವಾಗಿದ್ದು, ಇದನ್ನು  ಪಾಪ್ಯುಲರ್ ಫ್ರಂಟ್ ಇಂಡಿಯಾ ಸ್ಪಷ್ಟವಾಗಿ ತಳ್ಳಿಹಾಕಿದೆ ಮತ್ತು ಮಾಧ್ಯಮದ ಪ್ರಾಯೋಜಿತ ವರದಿಗಾರಿಕೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ಜಿನ್ನಾ ತಿಳಿಸಿದ್ದಾರೆ.

ಜಾರಿ ನಿರ್ದೇಶನಾಲಯದ ಕೆಲವು "ಅನಾಮಿಕ ಮೂಲ"ಗಳ ಮೂಲಕ ವರದಿ ಪಡೆಯಲಾಗಿದೆ ಎಂದು ನ್ಯೂಸ್ ಚಾನೆಲ್‌ಗಳು ಹೇಳಿವೆ. ಆದರೆ ಜಾರಿ ನಿರ್ದೇಶನಾಲಯವು ಸಂಘಟನೆಯನ್ನು ಸಂಪರ್ಕಿಸಿಯೂ ಇಲ್ಲ ಅಥವಾ ಅದು ಈ ಆರೋಪಗಳ ಕುರಿತಂತೆ ಈ ರೀತಿಯ ಯಾವುದೇ ಹೇಳಿಕೆಯನ್ನೂ ಹೊರಡಿಸಿಲ್ಲ. ಈ ಸುದ್ದಿಯಲ್ಲಿ ಸುಮಾರು 73 ಬ್ಯಾಂಕು ಖಾತೆಗಳನ್ನು ಪಾಪ್ಯುಲರ್ ಫ್ರಂಟ್‌ನೊಂದಿಗೆ ಜೋಡಿಸಲಾಗಿದೆ ಮತ್ತು ಸಿಎಎ ವಿರೋಧಿ ಪ್ರತಿಭಟನೆಗೆ ನೆರವು ನೀಡಲು ಪಾಪ್ಯುಲರ್ ಫ್ರಂಟ್ ನದ್ದು ಎಂದು ಹೇಳಲಾದ ಖಾತೆಗಳ ಮೂಲಕ ರೂ.120 ಕೋಟಿ ವರ್ಗಾಯಿಸಲಾಗಿದೆ ಎಂದು ಅದು ಹೇಳುತ್ತದೆ. ನಾವು ಈ ನೆಲದ ಕಾನೂನನ್ನು ಸಂಪೂರ್ಣವಾಗಿ ಪಾಲಿಸುವವರು ಎಂದು ಪಾಪ್ಯುಲರ್ ಫ್ರಂಟ್ ಹಲವಾರು  ಬಾರಿ ಒತ್ತಿ ಹೇಳಿದೆ ಮತ್ತು ಸಿಎಎ ಪ್ರತಿಭಟನೆಗಿಂತ ಅಲ್ಪ ಮೊದಲು ಪಾಪ್ಯುಲರ್ ಫ್ರಂಟ್ ಖಾತೆಯಿಂದ120 ಕೋಟಿ  ರೂ. ವರ್ಗಾಯಿಸಲಾಗಿದೆ ಎಂಬ ಆರೋಪ ಸಂಪೂರ್ಣ ನಿರಾಧಾರವಾಗಿದೆ. ಈ ಆರೋಪಗಳನ್ನು ಹೊರಿಸುವ ಮಂದಿ ಅವರು ತಮ್ಮ ಆರೋಪಗಳಿಗೆ ಪುರಾವೆಯನ್ನು ಒದಗಿಸಬೇಕು ಎಂದು ಅವರು ಹೇಳಿದರು.

ಕಪಿಲ್ ಸಿಬಲ್, ದುಷ್ಯಂತ್ ಸಿಂಗ್, ಇಂದಿರಾ ಜೈ ಸಿಂಗ್ ನಂತಹ ನ್ಯಾಯವಾದಿಗಳ ಖಾತೆಗಳಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೇರಳದಿಂದ ಹಣ ವರ್ಗಾಯಿಸಲಾಗಿದೆ ಎಂಬುದಾಗಿಯೂ ಕೆಲವು ನ್ಯೂಸ್ ಚಾನೆಲ್‌ಗಳು ಆರೋಪಿಸಿವೆ. ಈ ಹೇಳಿಕೆಯು ಭಾರತದಲ್ಲಿ ಸಂಭವಿಸುತ್ತಿರುವ ಪ್ರತಿಯೊಂದಕ್ಕೂ ಪಾಪ್ಯುಲರ್ ಫ್ರಂಟ್ ಹೊಣೆ ಎಂದು ತೀಕ್ಷ್ಣವಾಗಿ ದೂಷಿಸುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ಉದ್ದೇಶವನ್ನು ಬಹಿರಂಗಪಡಿಸಿದೆ. ವಾಸ್ತವವೆಂದರೆ ಈ ನ್ಯಾಯವಾದಿಗಳಿಗೆ ವರ್ಗಾಯಿಸಲಾಗಿದ್ದ ಹಣವು  2017ರಲ್ಲಿ ಹಾದಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದಿಸಲು ನೀಡಲಾಗಿದ್ದ ನ್ಯಾಯವಾದಿಗಳ ಶುಲ್ಕವಾಗಿತ್ತು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಹಣಕಾಸು ವರ್ಗಾವಣೆಯನ್ನು ಹಲವಾರು ಸಾರ್ವಜನಿಕ ಸಭೆಗಳಲ್ಲಿ ಬಹಿರಂಗವಾಗಿ ಘೋಷಿಸಿತ್ತು. 2017ರಲ್ಲಿ ನ್ಯಾಯವಾದಿಗಳ ಶುಲ್ಕದ ರೂಪದಲ್ಲಿ ವರ್ಗಾಯಿಸಲಾಗಿದ್ದ ಹಣವನ್ನು 2019ರ ಸಿಎಎ ಪ್ರತಿಭಟನೆ ಮಾಡಲಾದ ಹಣಕಾಸಿನ ನೆರವು ಎಂದು ಬಿಂಬಿಸುವುದು ಸಂಪೂರ್ಣ ಅಸಂಬದ್ಧವಾಗಿದೆ ಮತ್ತು ಇದು ಪಾಪ್ಯುಲರ್ ಫ್ರಂಟ್ ಅನ್ನು ತೇಜೋವಧೆ ಮಾಡುವ ಉದ್ದೇಶವನ್ನು ಬಹಿರಂಗಪಡಿಸಿದೆ ಎಂದು ಜಿನ್ನಾ ವಿವರಿಸಿದ್ದಾರೆ.

ಪಾಪ್ಯುಲರ್ ಫ್ರಂಟ್ ಕಾಶ್ಮೀರ ಘಟಕಕ್ಕೆ ಹಣ ವರ್ಗಾಯಿಸಲಾಗಿದೆ ಎಂಬುದು ಮತ್ತೊಂದು ಆರೋಪವಾಗಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಘಟಕ ಅಥವಾ ಶಾಖೆಯನ್ನು ಹೊಂದಿಲ್ಲ ಎಂಬುದು ಬಹಿರಂಗ ವಾಸ್ತವವಾಗಿದೆ. ಕಾಶ್ಮೀರದಲ್ಲಿ ಪಾಪ್ಯುಲರ್ ಫ್ರಂಟ್ ನ ಯಾವುದೇ ಶಾಖೆ ಕಾರ್ಯಾಚರಿಸುತ್ತಿದೆ ಎಂಬುದನ್ನು ತಥಾಕಥಿತ "ಅನಾಮಿಕ ಮೂಲಗಳು" ಸಾಬೀತುಪಡಿಸಲಿ ಎಂದು ನಾವು ಸವಾಲು ಹಾಕುತ್ತಿದ್ದೇವೆ. 2014ರಲ್ಲಿ ಕಾಶ್ಮೀರ ನೆರೆ ಪರಿಹಾರ ಕಾರ್ಯಕ್ಕೆ ಪಾಪ್ಯುಲರ್ ಫ್ರಂಟ್ ತನ್ನ ನೆರವಿನ ಹಸ್ತ ಚಾಚಿತ್ತು ಮತ್ತು ನೆರೆ ಸಂತ್ರಸ್ತರಿಗೆ 100ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಟ್ಟಿತ್ತು. ಈ ವಿಚಾರವನ್ನು ಸಂಘಟನೆಯು 2014ರಲ್ಲಿ ತನ್ನ ಅಧಿಕೃತ ಪ್ರಕಟನೆಗಳ ಮೂಲಕ ಸ್ವತಃ ಬಹಿರಂಗವಾಗಿ ಘೋಷಿಸಿತ್ತು. 2014ರ ನೆರೆ ಪರಿಹಾರವನ್ನು 2019ರ ಸಿಎಎ ವಿರೋಧಿ ಪ್ರತಿಭಟನೆಗೆ ಮಾಡಿದ ಹಣಕಾಸಿನ ನೆರವು ಎಂದು ಬಿಂಬಿಸಲಾಗುತ್ತಿದೆ, ಇದು  ಪಾಪ್ಯುಲರ್ ಫ್ರಂಟ್ ನ ಬೆಳವಣಿಗೆಯನ್ನು ತಡೆಯುವ ನಿಟ್ಟಿನಲ್ಲಿ ಮಾಡಲಾಗುತ್ತಿರುವ ಯೋಜನಾಬದ್ಧ ಷಡ್ಯಂತ್ರವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದರು.

ಈ ಮೊದಲು ಹೊರಿಸಲಾಗಿದ್ದ ಆರೋಪಗಳನ್ನು ಸಾಬೀತುಪಡಿಸಲು ಯಾವತ್ತೂ ಸಾಧ್ಯವಾಗಿಲ್ಲ, ಇದೀಗ ಈ ಹೊಸ ಆರೋಪಗಳ ಸರಣಿಯೂ ಅದೇ ವಿಧಿಯನ್ನು ಕಾಣಲಿದೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ. ಇತ್ತೀಚೆಗೆ ಉತ್ತರ ಪ್ರದೇಶ ಮತ್ತು ಅಸ್ಸಾಂ ಸರಕಾರವು ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರದಲ್ಲಿ ಪಾಪ್ಯುಲರ್ ಫ್ರಂಟ್ ನ ಪಾತ್ರವಿದೆ ಎಂದು ಆರೋಪಿಸಿದ್ದಲ್ಲದೇ, ನಮ್ಮ ರಾಜ್ಯ ಮಟ್ಟದ ನಾಯಕರನ್ನೂ ಬಂಧಿಸಿತ್ತು. ಆದರೆ ಆ ವೇಳೆ ಅವರ ಎಲ್ಲಾ ಪ್ರತಿಪಾದನೆಗಳು ಕೇವಲ ಕಾಲ್ಪನಿಕ ಕಥೆಗಳಾಗಿ ಉಳಿದುಬಿಟ್ಟವು ಹಾಗೂ ನ್ಯಾಯಾಲಯದಲ್ಲಿ ಅವುಗಳನ್ನು ಸಾಬೀತುಪಡಿಸಲು ಅವರಿಗೆ ಸಾಧ್ಯವಾಗಲಿಲ್ಲ ಮತ್ತು ನಮ್ಮ ನಾಯಕರು ಜಾಮೀನಿನ ಮೇಲೆ ಬಿಡುಗಡೆಯಾದರು. ನಮ್ಮನ್ನು ತಡೆಯಲು ಬಯಸುವ ಫ್ಯಾಸಿಸ್ಟ್ ಹಿನ್ನೆಲೆ ಹೊಂದಿರುವ ಶಕ್ತಿಗಳಿಂದ ನಡೆಸಲಾಗುತ್ತಿರುವ ಈ ರೀತಿಯ ಅಗ್ಗದ ಅಭಿಯಾನಗಳಿಂದ ಪಾಪ್ಯುಲರ್ ಫ್ರಂಟ್ ಯಾವತ್ತೂ ತಲೆ ಬಾಗುವುದಿಲ್ಲ. ಅಸಹಮತಿಯ ಧ್ವನಿಗಳನ್ನು ನಿಗ್ರಹಿಸಲು ಪ್ರಯತ್ನಿಸುತ್ತಿರುವ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ನಮ್ಮ ಹೋರಾಟವನ್ನು ನಾವು ಮುಂದುವರಿಸಲಿದ್ದೇವೆ ಎಂದು ಮುಹಮ್ಮದ್ ಅಲಿ ಜಿನ್ನಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News