15 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ: ಅಮೃತ್ ಶೆಣೈ

Update: 2020-01-28 12:35 GMT

ಉಡುಪಿ, ಜ. 28: ಸಹಬಾಳ್ವೆ ಉಡುಪಿ ವತಿಯಿಂದ ಸಮಾನ ಮನಸ್ಕರ ಸಹಯೋಗದೊಂದಿಗೆ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕಾಯ್ದೆ ವಿರುದ್ಧ ಜ.30ರಂದು ಸಂಜೆ 4ಗಂಟೆಗೆ ಉಡುಪಿಯ ಕ್ರಿಶ್ಚಿಯನ್ ಪಿಯು ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಪ್ರತಿಭಟನಾ ಸಭೆಯಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ತಿಳಿಸಿದ್ದಾರೆ.

ಉಡುಪಿ ಶೋಕಾ ಮಾತಾ ಇಗರ್ಜಿ ಚರ್ಚಿನ ಡೋನ್‌ಬಾಸ್ಕೋ ಹಾಲ್ ನಲ್ಲಿ ಇಂದು ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಾದ್ಯಂತ ತನ್ನ ಹೋರಾಟಗಳ ಮೂಲಕ ಚಿರಪರಿಚಿತರಾಗಿರುವ ಉತ್ತರ ಪ್ರದೇಶ ಮೂಲದ, ಬೀಮ್ ಆರ್ಮಿ ಸ್ಥಾಪಕ ಚಂದ್ರಶೇಖರ್ ಆಝಾದ್ ಮುಖ್ಯ ಭಾಷಣ ಮಾಡಲಿರುವರು ಎಂದರು.

ಅದೇ ರೀತಿ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್, ಸಾಮಾಜಿಕ ಹೋರಾಟಗಾರರಾದ ಮಹೇಂದ್ರ ಕುಮಾರ್, ಕವಿತಾ ರೆಡ್ಡಿ, ಮೆಹರೋಝ್ ಖಾನ್, ಭವ್ಯಾ ನರಸಿಂಹಮೂರ್ತಿ, ನಜ್ಮಾ ನಝೀರ್, ಅಮೂಲ್ಯ ಸಭೆಯಲ್ಲಿ ಭಾಗವಹಿಸಲಿರವರು ಎಂದು ಅವರು ಹೇಳಿದರು.

500 ಸ್ವಯಂಸೇವಕರು: ಸಹಸ್ರಾರು ಸಂಖ್ಯೆಯಲ್ಲಿ ಜನ ಭಾಗವಹಿ ಸುವ ಸಾಧ್ಯತೆಯಿಂದ ಟ್ರಾಫಿಕ್ ನಿಯಂತ್ರಣ, ಭಾಗವಹಿಸಿದ ಎಲ್ಲರಿಗೂ ಎಲ್ಲ ರೀತಿಯ ಸಹಕಾರ ನೀಡುವ ನಿಟ್ಟಿನಲ್ಲಿ ಸುಮಾರು 500 ಮಂದಿ ಸ್ವಯಂ ಸೇವಕ ರನ್ನು ನಿಯೋಜಿಸಲಾಗಿದೆ ಎಂದು ಅಮೃತ್ ಶೆಣೈ ತಿಳಿಸಿದರು.

ಅದೇ ರೀತಿ ಮೈದಾನದ ಅಸುಪಾಸಿನಲ್ಲಿ ಐದು ಎಲ್‌ಇಡಿ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ. ಪ್ರತಿಭಟನಕಾರರಿಗೆ ಕುಡಿಯುವ ನೀರಿನ ವ್ಯವಸ್ಥೆ, ತುರ್ತು ಚಿಕಿತ್ಸಾ ವ್ಯವಸ್ಥೆ, ಅಂಬ್ಯುಲೆನ್ಸ್ ವ್ಯವಸ್ಥೆ ಹಾಗೂ ತಾತ್ಕಾಲಿಕ ಶೌಚಾಲಯದ ವ್ಯವಸ್ಥೆಯನ್ನು ಮಾಡಲಾಗುವುದು. ಅಜ್ಜರಕಾಡು ಪುರಭವನದ ಹತ್ತಿರ, ಅಮ್ಮಣ್ಣಿ ರಾಮಣ್ಣ ಹಾಲ್‌ನ ಬಳಿಯ ಮೈದಾನದಲ್ಲಿ ಹಾಗೂ ಕ್ರಿಶ್ಚಿಯನ್ ಹೈಸ್ಕೂಲ್ ಆವರಣದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಹಬಾಳ್ವೆಯ ಫಾ.ವಿಲಿಯಂ ಮಾರ್ಟಿಸ್, ಸುಂದರ್ ಮಾಸ್ತರ್, ಬಾಲಕೃಷ್ಣ ಶೆಟ್ಟಿ, ಯೋಗೀಶ್ ಶೆಟ್ಟಿ, ರಮೇಶ್ ಕಾಂಚನ್, ಯಾಸೀನ್ ಮಲ್ಪೆ, ವರೋನಿಕಾ ಕರ್ನೆಲಿಯೋ, ಶಿಶ್ ಮುಹಮ್ಮದ್, ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಶಶಿಧರ ಹೆಮ್ಮಾಡಿ, ಶಹಝಾನ್ ತೋನ್ಸೆ, ರೋಶಿನಿ ಒಲಿವೇರಾ, ನಝೀರ್ ಅಹ್ಮದ್, ಸೈಫುಲ್ಲಾ ಉಪಸ್ಥಿತರಿದ್ದರು.

ಅನುಮತಿ ನಿರಾಕರಣೆ: ಪಾದಯಾತ್ರೆ ರದ್ದು

ಈ ಪ್ರತಿಭಟನಾ ಸಭೆಯ ಪ್ರಯುಕ್ತ ಉಡುಪಿ ಬನ್ನಂಜೆಯ ಎಸ್ಪಿ ಕಚೇರಿ ಬಳಿಯಿಂದ ನಡೆಸಲು ಉದ್ದೇಶಿಸಲಾಗಿದ್ದ ಪಾದಯಾತ್ರೆಯನ್ನು ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ ಎಂದು ಅಮೃತ್ ಶೆಣೈ ತಿಳಿಸಿದರು.

ವಿವಿಧ ರೀತಿಯಲ್ಲಿ ಮನವಿ ಮಾಡಿಕೊಂಡರೂ ಪೊಲೀಸ್ ಇಲಾಖೆ ನಮಗೆ ಪಾದಯಾತ್ರೆ ಮಾಡಲು ಅನುಮತಿಯನ್ನು ನಿರಾಕರಿಸಿತು. ಆದು ದರಿಂದ ಆ ಪಾದಯಾತ್ರೆಯನ್ನು ರದ್ದುಗೊಳಿಸಲಾಗಿದ್ದು, ಸಾರ್ವಜನಿಕರು ನೇರವಾಗಿ ಪ್ರತಿಭಟನಾ ಸಭೆ ನಡೆಯುವ ಮೈದಾನಕ್ಕೆ ಆಗಮಿಸಬೇಕು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News