ಕ್ರೀಡಾಪಟುಗಳು ಆಹಾರ ಸೇವನೆಯಲ್ಲಿ ಎಚ್ಚರ ವಹಿಸುವುದು ಅಗತ್ಯ: ಮಧುಕರ್

Update: 2020-01-28 14:37 GMT

ಉಡುಪಿ, ಜ.28: ಕ್ರೀಡಾಪಟುಗಳು ಆಹಾರ ಸೇವನೆಯಲ್ಲಿ ಬಹಳಷ್ಟು ಎಚ್ಚರಿಕೆ ವಹಿಸಬೇಕು. ಇಂದು ಪ್ರೋಟಿನ್‌ಯುಕ್ತ ಆಹಾರ ದಲ್ಲೂ ಡ್ರಗ್ಸ್ ಬಳಸಿ ರುವ ಸಾಧ್ಯತೆಗಳಿರುತ್ತದೆ. ಆದುದರಿಂದ ಕ್ರೀಡಾಪಟುಗಳು ಜಾಗೃತರಾಗಿರ ಬೇಕು ಎಂದು ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ್ ಎಸ್. ಹೇಳಿದ್ದಾರೆ.

ಮಣಿಪಾಲ ಅಕಾಡೆಮಿ ಆಪ್ ಹೈಯರ್ ಎಜ್ಯುಕೇಷನ್ (ಮಾಹೆ), ಕೇಂದ್ರ ಸರಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ನೇಷನಲ್ ಆ್ಯಂಟಿ ಡೋಪಿಂಗ್ ಏಜೆನ್ಸಿ(ನಾಡಾ), ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಣಿಪಾಲದ ಫಾರ್ಮಸ್ಯೂಟಿಕಲ್ ಕಾಲೇಜಿನ ಸಹಯೋಗದೊಂದಿಗೆ ಮಂಗಳವಾರ ಮಣಿಪಾಲ ಕೆಎಂಸಿಯ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಆಯೋಜಿಸಲಾದ ಕ್ರೀಡೆಯಲ್ಲಿ ಉದ್ದೀಪನ ಔಷಧಿ ಬಳಕೆ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆಯನ್ನು ವಹಿಸಿದ್ದ ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಮಾತನಾಡಿ, ಕ್ರೀಡೆಯಲ್ಲಿ ಪಾರದರ್ಶಕತೆ ಎಂಬುದು ಮುಖ್ಯ. ಆದು ದರಿಂದ ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಬೇಕು. ಉದ್ದೀ ಪನ ಔಷಧಿ ಬಳಕೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಲ್ಲಿ ದೈಹಿಕ ಶಿಕ್ಷಣಾಧಿಕಾರಿಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ ಎಂದರು.

ಕ್ರೀಡೆಯಲ್ಲಿ ಸೋಲು ಗೆಲುವುಗಿಂತ ಭಾಗವಹಿಸುವಿಕೆ ಮುಖ್ಯ. ಇದುವೇ ಕ್ರೀಡಾಪಟುಗಳ ಸಾಧನೆಗೆ ಮೂಲ ಆಗಿರುತ್ತದೆ. ವಿದ್ಯಾರ್ಥಿಗಳು ಕೇವಲ ಪಠ್ಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕೃತಿಕ ಹಾಗೂ ಕ್ರೀಡೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಅವರ ಸಮಗ್ರ ವ್ಯಕ್ತಿತ್ವದ ಬೆಳವಣಿಗೆ ಸಾಧ್ಯವಾಗುತ್ತೆ ಎಂದು ಅವರು ಅಭಿಪ್ರಾಯ ಪಟ್ಟರು.

ಮುಖ್ಯ ಅತಿಥಿಗಳಾಗಿ ಮಣಿಪಾಲ ಕೆಎಂಸಿಯ ಡೀನ್ ಡಾ.ಶರತ್ ರಾವ್ ಕೆ., ನೇಷನಲ್ ಆ್ಯಂಟಿ ಡೋಪಿಂಗ್ ಏಜೆನ್ಸಿಯ ಯೋಜನಾಧಿಕಾರಿ ಡಾ. ಅಂಕುಷ್ ಗುಪ್ತಾ ಮಾತನಾಡಿದರು.

ಮಣಿಪಾಲದ ಫಾರ್ಮಸ್ಯೂಟಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಸಿ. ಮಲ್ಲಿಕಾರ್ಜುನ ರಾವ್ ಸ್ವಾಗತಿಸಿದರು. ಅಸೋಸಿಯೇಟ್ ಪ್ರೊಫೆಸರ್ ಡಾ. ಅನುಪ್ ನಹಾ ಕಾರ್ಯಕ್ರಮ ನಿರೂಪಿಸಿದರು. ಮಾಹೆಯ ಕ್ರೀಡಾ ಕೌನ್ಸಿಲ್‌ನ ಕಾರ್ಯದರ್ಶಿ ಡಾ.ವಿನೋದ್ ನಾಯಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News