ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ಕಾಯ್ದೆ ವಿರೋಧಿಸಿ ಸತ್ಯಾಗ್ರಹ

Update: 2020-01-28 14:39 GMT

ಉಡುಪಿ, ಜ.28: ಕೇಂದ್ರ ಸರಕಾರದ ಅಸಾಂವಿಧಾನಿಕ ಎನ್‌ಆರ್‌ಸಿ, ಸಿಎಎ ಹಾಗೂ ಎನ್‌ಪಿಆರ್ ಕಾಯ್ದೆಯನ್ನು ವಿರೋಧಿಸಿ ಎಸ್‌ಎಸ್‌ಎಫ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿರುವ ಗಾಂಧಿ ಪ್ರತಿಮೆಯ ಎದುರು ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲೆ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಭಾರತೀಯರ ಅಸ್ಥಿತ್ವವನ್ನು ಮತ್ತು ಭಾರತೀಯತೆಯನ್ನು ಪ್ರಶ್ನಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವೆನಿಸುವ ಪೌರತ್ವ ಕಾಯ್ದೆಯನ್ನು ಕೇಂದ್ರ ಸರಕಾರ ಜಾರಿಗೆ ತರುತ್ತಿದೆ. ಈ ಮೂಲಕ ಧರ್ಮಗಳನ್ನು ಒಡೆಯುವ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ದೂರಿದರು.

ಕೇಂದ್ರ ಸರಕಾರದ ಈ ಅಸಾಂವಿಧಾನಿಕ ನಡೆಯನ್ನು ಸಂಪೂರ್ಣವಾಗಿ ಪ್ರತಿ ಯೊಬ್ಬರು ವಿರೋಧಿಸಬೇಕಾಗಿದೆ. 370ವಿಧಿಯ ರದ್ಧತಿ, ತ್ರಿವಳಿ ತಲಾಖ್, ಬಾಬರಿ ಮಸೀದಿ ಮೊದಲಾದ ತೀರ್ಪು ಬಂದಾಗ ಮುಸ್ಲಿಂ ಸಮುದಾಯವು ಮೌನವಾಗಿದ್ದನ್ನು ಮನಗಂಡು ಈ ಕಾಯ್ದೆಯನ್ನು ತರಲಾಗಿದೆ. ಆದರೆ ಈ ಕಾಯ್ದೆ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲ, ಎಲ್ಲಾ ಭಾರತೀಯರಿಗೂ ಮಾರಕ ವಾಗಿದೆ. ಜನ ವಿರೋಧಿಯಾಗಿರುವ ಈ ಕಾಯ್ದೆಯನ್ನು ಅನುಷ್ಟಾನಗೊಳಿಸಲು ನಾವು ಬಿಡುವುದಿಲ್ಲ ಎಂದರು.

 ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಶಬೀರ್ ಸಖಾಫಿ, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಅಂಜದಿ, ಮುಹಮ್ಮದ್ ರಖೀಬ್ ಮಾಸ್ಟರ್ ಮಾತನಾಡಿದರು. ಎಸ್‌ಎಸ್‌ಎಫ್ ರಾಜ್ಯ ಕೋಶಾಧಿಕಾರಿ ರವೂಫ್ ಖಾನ್, ಶರೀಫ್ ಸಖಾಫಿ ಉಚ್ಚಿಲ, ಮುಹಿಯ್ಯದ್ದೀನ್ ಸಖಾಫಿ ಹನೀಫ್ ಬಿಲ್ಲೇಶ್ವರ ಮೊದಲಾದವರು ಹಾಜರಿದ್ದರು. ಸಾರೆ ಜಹಾನ್ಸೆ ಹಾಡನ್ನು ಗಾಯಕ ಬಶೀರ್ ಮಜೂರು ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News