ಪ್ರಧಾನಿ ಮೋದಿಗೆ ವಿದೇಶಿಯರ ಬಗ್ಗೆ ಅಭಿಮಾನ, ಸ್ವದೇಶೀಯರ ಬಗ್ಗೆ ಅನುಮಾನ: ಮಾಜಿ ಸ್ಪೀಕರ್ ರಮೇಶ್ ಕುಮಾರ್

Update: 2020-01-28 15:29 GMT

ಉಳ್ಳಾಲ: ಪ್ರಧಾನಿ ಮೋದಿಗೆ ವಿದೇಶಿಯರ ಬಗ್ಗೆ ಅಭಿಮಾನ, ಸ್ವದೇಶೀಯರ ಬಗ್ಗೆ ಅನುಮಾನವಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

ಅವರು ಪೌರತ್ವ  ಹೋರಾಟ ಸಮಿತಿ ಕಲ್ಲಾಪು ಇದರ ಆಶ್ರಯದಲ್ಲಿ ಕಲ್ಲಾಪು ಯುನಿಟ್ ಹಾಲ್ ಮೈದಾನದಲ್ಲಿ ನಡೆದ ಎನ್ ಆರ್ ಸಿ ಕಾಯ್ದೆ ವಿರುದ್ಧ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟಗಾರರು, ಸಂವಿಧಾನ ರಚನೆ ಮಾಡಿದ ಅಂಬೇಡ್ಕರ್ ಜಾತಿ ತಾರತಮ್ಯ ಮಾಡಿಲ್ಲ. ಹಿಂದೂ ಧರ್ಮದ ಮೇಲ್ಜಾತಿಯ ಕಿರುಕುಳ ತಾಳಲಾರದೆ ಅಂಬೇಡ್ಕರ್ ನಾನು ಹಿಂದೂ ಆಗಿ ಸಾಯುವುದಿಲ್ಲ ಎಂದಿದ್ದರು. ಅವರು ಅಂತಿಮವಾಗಿ ಬೌದ್ಧ ಧರ್ಮ ಸ್ವೀಕರಿಸಿದರು ಎಂದು ರಮೇಶ್ ಕುಮಾರ್ ಹೇಳಿದರು.

1789ರಲ್ಲಿ ಅಸ್ತಿತ್ವಕ್ಕೆ ಬಂದ ಅಮೆರಿಕ 1991ರಲ್ಲಿ ತಿದ್ದುಪಡಿ ತಂದು ಧರ್ಮ, ಜಾತಿ ತಾರತಮ್ಯ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಘೋಷಿಸಿತ್ತು. ಇದನ್ನು ಅಂಬೇಡ್ಕರ್ ಕೂಡ ಸಂವಿಧಾನದಲ್ಲಿ ಉಲ್ಲೇಖಿಸಿದ್ದಾರೆ. ಹಿಂದೂ ರಾಷ್ಟ್ರ ಬೇಕು ಎಂದು ಬಯಸುವವರು ಅಂಬೇಡ್ಕರ್ ಕಾಲದಲ್ಲಿ ಯಾರಲ್ಲೂ ಕೂಡ ಹಿಂದೂ ರಾಷ್ಟ್ರದ  ಭಾವನೆ ಇರಲಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಲಿ ಎಂದು ಹೇಳಿದರು.

ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಬೀಬ್ ಸಖಾಫಿ ದುವಾ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಪುರಸಭಾ ಮಾಜಿ ಕೌನ್ಸಿಲರ್ ದಿನೇಶ್ ರೈ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೇಪಾಡಿ, ಮುನೀರ್ ಸಖಾಫಿ, ಮುಹಮ್ಮದ್ ಕುಂಞಿ, ವಕೀಲ ಅಬ್ದುಲ್ ಮಜೀದ್ ಖಾನ್, ಶಾಸಕ ಖಾದರ್, ವಿಧಾನ ಪರಿಷತ್ ಸದಸ್ಯ ನಝೀರ್ ಅಹ್ಮದ್, ದ.ಕ. ಸಲಫಿ ಮೂವ್ ಮೆಂಟ್ ನ ಮುಹಮ್ಮದ್ ಗುಲಾಂ,ಅಬ್ದುಲ್ ಅಝೀಝ್ ದಾರಿಮಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಸಂತೋಷ್ ಅಸೈಗೋಳಿ ಉಪಸ್ಥಿತರಿದ್ದರು. ಸಲೀಂ ಯು.ಬಿ. ಸ್ವಾಗತಿಸಿದರು. ತಾ.ಪಂ.ಅಧ್ಯಕ್ಷ ಮುಹಮ್ಮದ್ ಮೋನು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News