ಸುನಿತಾ ಪ್ರಭುಗೆ ರಾಷ್ಟ್ರಪತಿ ಬಾಲ ಪುರಸ್ಕಾರ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ

Update: 2020-01-28 15:23 GMT

ಮಂಗಳೂರು, ಜ.28: ಅಮೆರಿಕದ ಫಿನಿಕ್ಸ್ ನಗರದಲ್ಲಿ ಇತ್ತೀಚೆಗೆ ನಡೆದ 80ನೇ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಮಾನಾಥ್ ಕೊವಿಂದ್ ಅವರಿಂದ ಬಾಲ ಪುರಸ್ಕಾರ ಪಡೆದ ಬೆಳ್ತಂಗಡಿಯ ಮೂರ್ಜೆ ಸುನಿತಾ ಪ್ರಭು (17) ಅವರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಜಿಲ್ಲಾಡಳಿತದ ಪರವಾಗಿ ಶಾಸಕ ಡಿ.ವೇದವ್ಯಾಸ್ ಕಾಮತ್ ಅದ್ಧೂರಿಯಾಗಿ ಸ್ವಾಗತಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಷ್ಟ್ರಪತಿ ಬಾಲ ಪುರಸ್ಕಾರ ವಿಜೇತೆ ಮೂರ್ಜೆ ಸುನಿತಾ ಪ್ರಭು ಸೊಳ್ಳೆ, ‘ನಿವಾರಕ ಬಟ್ಟೆ ತಯಾರಿಸುವ ಸಂಶೋಧನೆಗಾಗಿ ಬಾಲ ಪುರಸ್ಕಾರ ಬಂದಿದೆ. ಸೊಳ್ಳೆ ನಿವಾರಕ ಬಟ್ಟೆಗಳನ್ನು ಮನೆಯಲ್ಲಿ ಬಳಸುವುದರಿಂದ ಸೊಳ್ಳೆಗಳಿಗೆ ಕಡಿವಾಣ ಹಾಕಬಹುದು. ಇದನ್ನು ಹಲವು ತಿಂಗಳುಗಳ ಕಾಲ ಬಳಸಬಹುದಾಗಿದ್ದು, ಸುಮಾರು 49 ಬಾರಿ ಶುಚಿಗೊಳಿಸಿ ಬಳಸಬಹುದಾಗಿದೆ’ ಎಂದು ತಿಳಿಸಿದ್ದಾರೆ.

ಪೇಟೆಂಟ್ ಶೀಘ್ರ: ಸದ್ಯ ಕಾಟನ್ ಬಟ್ಟೆಗಳಿಂದ ‘ಸೊಳ್ಳೆ ನಿವಾರಕ ಬಟ್ಟೆ’ ಉತ್ಪನ್ನಗಳನ್ನು ಹೊರತರಲಾಗುತ್ತಿದ್ದು, ಸಿಲ್ಕ್ ಸಹಿತ ವಿವಿಧ ನಮೂನೆಯ ಬಟ್ಟೆಗಳಲ್ಲೂ ಪ್ರಯೋಗ ನಡೆಯಲಿದೆ. ‘ಸೊಳ್ಳೆ ನಿವಾರಕ ಬಟ್ಟೆ’ಯ ಹಕ್ಕುಸ್ವಾಮ್ಯ ಶೀಘ್ರದಲ್ಲೇ ಪಡೆದು ಕೊಳ್ಳಲಿದ್ದೇವೆ’ ಎಂದು ಸುನಿತಾ ಪ್ರಭು ಸಂತಸ ವ್ಯಕ್ತಪಡಿಸಿದರು.

ಭಾರತೀಯ ಪ್ರತಿನಿಧಿ: 2018ರಲ್ಲಿ ದೆಹಲಿಯಲ್ಲಿ ಆನ್‌ಲೈನ್‌ನಲ್ಲಿ ಮೂಲಕ ‘ಐರಿಶ್ ನ್ಯಾಶನಲ್ ಸೈನ್ಸ್ ಫೇರ್’ ಸ್ಪರ್ಧೆ ಪ್ರಕಟವಾ ಯಿತು. 2000ಕ್ಕೂ ಅಧಿಕ ಅರ್ಜಿಗಳನ್ನು ಹಾಕಲಾಗಿತ್ತು. ಅದರಲ್ಲಿ ಆಯ್ದ 250 ಪ್ರಾಜೆಕ್ಟ್‌ಗಳು ‘ಸ್ಕೈಪ್ ಕಾಲಿಂಗ್’ಗೆ ಆಯ್ಕೆಯಾದವು. ಈ ಪೈಕಿ 80 ಪ್ರಾಜೆಕ್ಟ್‌ಗಳನ್ನು ದೆಹಲಿಯಲ್ಲೇ ಪ್ರಾಯೋಜಿಕವಾಗಿ ಪ್ರಸ್ತುತಪಡಿಸಬೇಕಿತ್ತು. ಇದರಲ್ಲಿ 20 ಅತ್ಯುತ್ತಮ ಪ್ರಾಜೆಕ್ಟ್‌ಗಳನ್ನು ಅಮೆರಿಕದ ಫೀನಿಕ್ಸ್ ನಗರದಲ್ಲಿ ನಡೆದ ‘ಇಂಟರ್‌ನ್ಯಾಶನಲ್ ನ್ಯಾಶನಲ್ ಸೈನ್ಸ್ ಫೇರ್’ ಸ್ಪರ್ಧೆಗೆ ಕಳುಹಿಸಿಕೊಡಲಾಯಿತು. ಆಗ ಭಾರತವನ್ನು ಪ್ರತಿನಿಧಿಸಲು ಅವಕಾಶ ದೊರೆಯಿತು. ಅಲ್ಲದೆ, 120 ರಾಷ್ಟ್ರಗಳಿಂದ ತಮ್ಮ ಪ್ರತಿಭೆಯನ್ನು ವಿಶ್ವಮಟ್ಟದಲ್ಲಿ ಪ್ರದರ್ಶಿಸಲು ಬಂದಿದ್ದರು ಎಂದು ಸುನಿತಾ ಪ್ರಭು ವಿವರಿಸಿದರು.

ಕೈಯಲ್ಲಿ ನಾನಾ ಪ್ರಾಜೆಕ್ಟ್: ‘ಉಜಿರೆಯ ಎಸ್‌ಡಿಎಂ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿಯಲ್ಲಿ ಇರುವಾಗಲೇ ಈ ಅರ್ಜಿ ‘ಸೊಳ್ಳೆ ನಿವಾರಕ ಬಟ್ಟೆ’ ಅನ್ವೇಷಣೆಯ ಅರ್ಜಿ ಸಲ್ಲಿಸಿದ್ದೆ. ಜಿಲ್ಲೆಯಲ್ಲಿ ಸೊಳ್ಳೆ ಕಡಿತದಿಂದ ರೋಗ ಉಲ್ಬಣಿಸುತ್ತಿದೆ. ಡೆಂಗ್‌ನಿಂದ ಹಲವು ಸಾವು-ನೋವು ಪ್ರಕರಣಗಳು ನಡೆದಿವೆ. ಈ ಬಗ್ಗೆ ‘ಗೂಗಲ್’ನಲ್ಲಿ ಹಲವು ವರದಿಗಳ ಹುಡುಕಾಟ ನಡೆಸಿದ್ದೆ. ಬಳಿಕ ‘ಸೊಳ್ಳೆ ನಿವಾರಕ ಬಟ್ಟೆ’ ಅನ್ವೇಷಣೆ ಮಾಡಲು ಸಾಧ್ಯವಾಯಿತು. ಪುಣೆಯ ಲ್ಯಾಬ್‌ನಲ್ಲಿ ಪ್ರಾಜೆಕ್ಟ್ ಪೂರ್ಣಗೊಂಡಿತ್ತು. ಸದ್ಯ ಮಂಗಳೂರಿನ ‘ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ (ಸಿಎಫ್‌ಎಎಲ್)’ ಕಾಲೇಜಿನಲ್ಲಿ ಪಿಯುಸಿ (ಪ್ರಥಮ) ಓದುತ್ತಿದ್ದೇನೆ. ಈ ಸಂಶೋಧನೆ ಯಶಸ್ವಿಯಾಗುತ್ತಿದ್ದು, ಇನ್ನ ಹಲವು ಸಂಶೋಧನೆಗಳು ಕೈಯಲ್ಲಿವೆ. ಪೋಷಕರಿಂದ ಉತ್ತಮ ಬೆಂಬಲವಿದೆ’ ಎಂದು ಹೇಳಿದರು.

‘ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಮನಾಥ ಕೋವಿಂದ್ ಅವರಿಂದ ಪುರಸ್ಕಾರ ಸ್ವೀಕರಿಸುವ ಸಂದರ್ಭವು ರೋಮಾಂಚನ ಕಾರಿಯಾಗಿತ್ತು. ಪ್ರಧಾನಿ ಕಚೇರಿಯಲ್ಲಿ ನರೇಂದ್ರ ಮೋದಿಯವರು ಮಕ್ಕಳ ಜತೆ ಆತ್ಮೀಯವಾಗಿ ಮಾತನಾಡಿದರು. ಪ್ರಧಾನಿಯ ‘ಎಕ್ಸಾಮ್ ವಾರಿಯರ್’, ಟ್ಯಾಬ್, ಪ್ರಧಾನಿ ಸಹಿ ಹಾಕಿದ್ದ ವಾಚ್‌ನ್ನು ಕೊಡುಗೆಯಾಗಿ ನೀಡಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿಯವರೂ ಮಕ್ಕಳ ಜತೆ ಮಕ್ಕಳಾಗಿಯೇ ಖುಷಿಯಿಂದ ಕೆಲಹೊತ್ತು ಕಳೆದರು’ ಎಂದು ಹೇಳಿದರು.

ಈ ಸಂದರ್ಭ ಸುನಿತಾ ಪ್ರಭು ಅವರ ಪೋಷಕರಾದ ವಿವೇಕಾನಂದ ಪ್ರಭು, ಶಾಂತಲಾ ಪ್ರಭು, ಸಹೋದರ ರಾಹುಲ್, ಮಾಜಿ ಶಾಸಕ ಯೋಗೀಶ್ ಭಟ್, ಪ್ರತಾಪ್ ಸಿಂಹ ನಾಯಕ್, ಬೆಸೆಂಟ್ ಸಂಸ್ಥೆಯ ಗಣೇಶ್ ಭಟ್, ಬೆಳ್ತಂಗಡಿ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಶಶಿಧರ್ ಪೈ, ಅಡ್ವೊಕೇಟ್ ಸುದೇಶ್, ನಾಗೇಶ್, ಕರುಣಾಕರ್, ಶಾಂತಾರಾಮ್ ಮತ್ತಿತರರು ಉಪಸ್ಥಿತರಿದ್ದರು.

ಪುತ್ರಿಯು ಚಿಕ್ಕ ವಯಸ್ಸಿನಿಂದಲೂ ಪ್ರತಿಭಾನ್ವಿತೆ. ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಳೆ. ರಾಷ್ಟ್ರಪತಿ ಬಾಲ ಪುರಸ್ಕಾರ ಪಡೆದಿರುವುದು ತುಂಬ ಖುಷಿಯಾಗಿದೆ. ದೇಶವನ್ನು ಪ್ರತಿನಿಧಿಸಿರುವುದು ಹೆಮ್ಮೆಯ ವಿಷಯವಾಗಿದೆ.

- ವಿವೇಕಾನಂದ ಪ್ರಭು, ರಾಷ್ಟ್ರಪತಿ ಬಾಲ ಪುರಸ್ಕಾರ ವಿಜೇತೆಯ ತಂದೆ

ಜಿಲ್ಲೆಯ ಬಾಲಕಿ ಮೂರ್ಜೆ ಸುನಿತಾ ಪ್ರಭು ಅತ್ಯುತ್ತಮ ಸಾಧನೆ ಮಾಡಿದ್ದು, ಜಿಲ್ಲೆಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಕೊಂಡೊಯ್ದಿರು ವುದು ಎಲ್ಲರಿಗೂ ಮಾದರಿಯಾಗಿದೆ. ಹೊಸ ವಿಚಾರಗಳ ಮೂಲಕ ಹೊಸತನ ಕೊಡಬಹುದು ಎನ್ನುವುದನ್ನು ಬಾಲಕಿ ತೋರಿಸಿಕೊಟ್ಟಿದ್ದಾಳೆ. ಬಾಲಕಿಯು ಮುಂದಿನ ದಿನಗಳಲ್ಲಿ ವಿಶ್ವಮಟ್ಟದಲ್ಲಿ ಸಾಧನೆ ಮಾಡಲಿ.

- ವೇದವ್ಯಾಸ ಕಾಮತ್, ಶಾಸಕ, ಮಂಗಳೂರು ದಕ್ಷಿಣ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News