ಮಂಗಳೂರು: ಸರಕಾರಿ ಕಚೇರಿಗಳಲ್ಲಿರುವ ಗಾಲಿಕುರ್ಚಿಗಳ ಪರಿಶೀಲನೆಗೆ ತಹಶೀಲ್ದಾರ್ ಸೂಚನೆ

Update: 2020-01-28 15:26 GMT

ಮಂಗಳೂರು, ಜ.28: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಸರಕಾರಿ ಕಚೇರಿಗಳಲ್ಲಿರುವ ವಿಕಲಚೇತನರ ಪ್ರಯೋಜನ ಕ್ಕಾಗಿ ಬಳಕೆಯಾಗುವ ವ್ಹೀಲ್‌ಚೇರ್‌ಗಳ ಪರಿಸ್ಥಿತಿ ಹೇಗಿದೆ, ಯಾವ ರೀತಿಯಲ್ಲಿ ಉಪಯೋಗವಾಗುತ್ತಿದೆ ಎಂಬುವುದನ್ನು ಪರಿಶೀಲಿಸಿ 15 ದಿನದೊಳಗೆ ಮಾಹಿತಿ ನೀಡಬೇಕು ಎಂದು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಸೂಚಿಸಿದ್ದಾರೆ.

ಮಂಗಳೂರು ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅನುಷ್ಠಾನ ಗೊಂಡಿರುವ ವಿವಿಧ ಯೋಜನೆಗಳ ಸುಗಮ ಕಾರ್ಯಾಚರಣೆ ಬಗ್ಗೆ ತಾಲೂಕು ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾಡಿದರು.

ವಿಕಲಚೇತನರ ಕುಂದು ಕೊರತೆ ನಿವಾರಣೆ ಸಮಿತಿಯ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಆದಾಯದ ಮಿತಿ ಇರುವುದರಿಂದ ವಿಕಲಚೇತರನರಿಗೆ ಪಿಂಚಣಿ ಸಿಗಲು ತೊಂದರೆಯಾಗುತ್ತಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದರು. ಎಂಡೋಸಲ್ಫಾನ್ ಪೀಡಿತರಿಗೆ ಆರೋಗ್ಯ ಇಲಾಖೆಯಿಂದ ಆಧಾರ್ ಕಾರ್ಡ್ ನೀಡುವಂತೆ ತಾಲೂಕು ಆರೋಗ್ಯಾ ಧಿಕಾರಿಗೆ ತಹಶೀಲ್ದಾರ್ ಸೂಚಿಸಿದರು.

ಸರಕಾರದ ನೂತನ ಆದೇಶದಂತೆ ಮಂಗಳಮುಖಿಯರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ವಿವಿಧ ಇಲಾಖೆಗಳ ಸೌಲಭ್ಯಗಳ ಮಾಹಿತಿ ನೀಡಲು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನೂತನ ಸಮಿತಿ ರಚಿಸಿ ಸಭೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ನಗರದ ಕೆಲವು ಶಾಲಾ, ಕಾಲೇಜು ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಕುರಿತು ದೂರುಗಳು ಗೋಚರಿಸುತ್ತಿದ್ದು, ಅಂತಹ ಸ್ಥಳಗಳಿಗೆ ಸಮಿತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಸಮಿತಿಯಡಿ 2018-19ನೆ ಸಾಲಿನಲ್ಲಿ ದಾಖಲೆಯಾದ ಪ್ರಕರಣಗಳಲ್ಲಿ 59 ದಾವೆ ವ್ಯಾಜ್ಯಗಳು ದಾಖಲಾಗಿರುತ್ತದೆ. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ನೇರವಾಗಿ 21 ದಾವೆಗಳು ದಾಖಲಾಗಿದ್ದು, ಉಳಿದ 38 ಪ್ರಕರಣ ನ್ಯಾಯಾಲಯಕ್ಕೆ ನೇರವಾಗಿ ಸಲ್ಲಿಸಲಾಗಿದೆ. ಕಚೇರಿಗೆ ದಾಖಲಾದ ಪ್ರಕರಣಗಳ ಪೈಕಿ 15 ಪ್ರಕರಣ ಸಮಾಲೋಚನೆಯ ಮೂಲಕ ಇತ್ಯರ್ಥಗೊಳಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದರು.

ಭಾಗ್ಯಲಕ್ಷ್ಮಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಬಾಂಡ್ ಬರುತ್ತಿರುವ ಬಗ್ಗೆ ಮಾಹಿತಿ ನೀಡಲಾಯಿತು. ಭೇಟಿ ಬಚಾವೋ, ಭೇಟಿ ಪಡಾವೋ ಯೋಜನೆಯಡಿ ಗ್ರಾಮೀಣ, ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿರುವ ಬಗ್ಗೆ ಮಾಹಿತಿ ನೀಡಲಾಯಿತು.

ಸಭೆಯಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಸುಜಯ್, ಶಿಶು ಅಭಿವೃದ್ಧಿ ಯೋಜನೆ ಪ್ರತಿನಿಧಿಗಳು, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News