ಫುಟ್ಬಾಲ್ ಲೀಗ್ ಪಂದ್ಯಾವಳಿ: ಜೆನಿಫಾ ಉಳ್ಳಾಲ, ಬೋಳಾರ ಬ್ರದರ್ಸ್‌ ತಂಡಕ್ಕೆ ಪ್ರಶಸ್ತಿ

Update: 2020-01-28 15:33 GMT
ಜೆನಿಫಾ ಉಳ್ಳಾಲ

ಮಂಗಳೂರು, ಜ.28: ಕರ್ನಾಟಕ ರಾಜ್ಯ ಪುಟ್‌ಬಾಲ್ ಸಂಸ್ಥೆಯ ಸಹಯೋಗದೊಂದಿಗೆ ದ.ಕ.ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ವತಿಯಿಂದ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಫುಟ್ಬಾಲ್ ಲೀಗ್ ಪಂದ್ಯಾವಳಿಯ ‘ಎ’ ಡಿವಿಜನ್ ವಿಭಾಗದಲ್ಲಿ ಉಳ್ಳಾಲದ ಜೆನಿಫಾ ತಂಡ ಉಳ್ಳಾಲದ ಇನ್ನೊಂದು ತಂಡವಾದ ಸೋಕರ್ಸ್‌ ತಂಡವನ್ನು ಟೈ ಬ್ರೇಕರ್‌ನಲ್ಲಿ 4-1 ಗೋಲು ಗಳಿಂದ ಸೋಲಿಸಿ ಅಹಮ್ಮದ್ ಮಾಸ್ಟರ್ ಸ್ಮಾರಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಪಂದ್ಯಾವಳಿಯ ಪೂರ್ಣ ಅವಧಿಯಲ್ಲಿ ಇತ್ತಂಡಗಳು ಗೋಲು ಗಳಿಸಲು ಸಾಧ್ಯವಾಗದ ಕಾರಣ ಫಲಿತಾಂಶವನ್ನು ಪೆನಾಲ್ಟಿ ಶೂಟೌಟ್ ಮೂಲಕ ಪಡೆಯಬೇಕಾಯಿತು. ಮೊದಲು ನಡೆದ ಲೀಗ್ ಹಂತದಲ್ಲಿ ಜೆನಿಫಾ ತಂಡ ಆಡಿದ 4 ಪಂದ್ಯಗಳಲ್ಲಿ 2 ಜಯ ಹಾಗೂ 2 ಡ್ರಾ ಸಾಧಿಸಿ 8 ಅಂಕಗಳೊಂದಿಗೆ ಸೆಮಿಫೈನಲ್ ಪ್ರವೇಶಿಸಿ, ಸೆಮಿಫೈನಲ್‌ನಲ್ಲಿ ಮಾಸ್ ಉಳ್ಳಾಲ ತಂಡವನ್ನು 2-0 ಗೋಲುಗಳಿಂದ ಸೋಲಿಸಿ ಫೈನಲ್ ತಲುಪಿತು. ಸೋಕರ್ಸ್‌ ತಂಡ ಕೂಡ ಲೀಗ್ ಹಂತದಲ್ಲಿ 8 ಅಂಕ ಗಳಿಸಿ ಸೆಮಿಫೈನಲ್ಸ್ ತಲುಪಿ ಮಂಗಳೂರಿನ ಬೆಂಗ್ರೆ ವಿದ್ಯಾರ್ಥಿ ಸಂಘ ತಂಡವನ್ನು 1-0 ಗೋಲುಗಳಿಂದ ಸೋಲಿಸಿ ಫೈನಲ್ ತಲುಪಿತು.

‘ಬಿ’ ಡಿವಿಜನ್‌ನಲ್ಲಿ ನಡೆದ ಫೈನಲ್ ಪಂದ್ಯಾಟದಲ್ಲಿ ಮಂಗಳೂರು ಬೋಳಾರ ಬ್ರದರ್ಸ್‌ ತಂಡ ಮಂಗಳೂರಿನ ಅಝಾರಿಯಾ ತಂಡವನ್ನು ಟೈಬ್ರೇಕರ್ ಮೂಲಕ 4-3 ಗೋಲುಗಳ ಅಂತರದ ಜಯ ಸಾಧಿಸಿ ದಿ. ಪಳ್ಳಿ ಜಯರಾಮ ಶೆಟ್ಟಿ ಸ್ಮಾರಕ ಪ್ರಶಸ್ತಿಯನ್ನು ಪಡೆದುಕೊಂಡಿತು.

ಈ ಮೊದಲು ಲೀಗ್ ಹಂತದಲ್ಲಿ ನಡೆದ ಪಂದ್ಯಗಳಲ್ಲಿ ಎರಡೂ ತಂಡಗಳು ತಲಾ 7 ಅಂಕ ಗಳಿಸಿ ಸೆಮಿಫೈನಲ್ ಹಂತವನ್ನು ತಲುಪಿದೆ. ಸೆಮಿಫೈನಲ್‌ನಲ್ಲಿ ಬೋಳಾರ ಬ್ರದರ್ಸ್‌ ತಂಡ ಮಾರ್ಚಂಟ್ಸ್ ತಂಡವನ್ನು 2-0 ಗೋಲುಗಳಿಂದ, ಅಝಾರಿಯಾ ತಂಡ ಏಶಿಯನ್ ಉಳ್ಳಾಲ ತಂಡವನ್ನು ಟೈಬ್ರೇಕರ್ಸ್‌ನಲ್ಲಿ 4-3 ಗೋಲುಗಳಿಂದ ಸೋಲಿಸಿ ಫೈನಲ್ ಹಂತ ತಲುಪಿತ್ತು.

‘ಎ’ ಡಿವಿಜನ್‌ನಲ್ಲಿ 10 ತಂಡಗಳು ‘ಬಿ’ ಡಿವಿಜನ್‌ನಲ್ಲಿ 8 ತಂಡಗಳು ಭಾಗವಹಿಸಿದ್ದವು. ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಯಿತು. ಬೋಳಾರ ಬ್ರದರ್ಸ್‌ ತಂಡದ ಮುಬೀನ್ ಹಾಗೂ ಜೆನಿಫಾ ತಂಡದ ಅನ್ವರ್ ಉತ್ತಮ ಗೋಲ್‌ಕೀಪರ್ ಪ್ರಶಸ್ತಿ ಪಡೆದುಕೊಂಡರೆ ಸೋಕರ್ಸ್‌ ತಂಡ ರಾಝಿಕ್ ಹಾಗೂ ಬೋಳಾರ ತಂಡದ ಜಾಸಿಮ್ ಉತ್ತಮ ಆಟಗಾರ ಪ್ರಶಸ್ತಿ ಪಡೆದುಕೊಂಡರು. ಅಝಾರಿಯಾ ತಂಡದ ಇಶಾಮ್ ಉದಯೋನ್ಮುಕ ಆಟಗಾರನಾಗಿ ಆಯ್ಕೆಯಾಗಿ ದಿ.ಟಿ.ಎ. ರೆಹ್ಮಾನ್ ಪ್ರಶಸ್ತಿಯನ್ನು ಪಡೆದುಕೊಂಡರು.

ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭದಲ್ಲಿ ಮಂಗಳೂರು ದಕ್ಷಿಣ ಠಾಣೆಯ ನಿರೀಕ್ಷಕ ಲೋಕೇಶ್, ಅಕ್ಷರ ಸಂತ ಹಾಗೂ ಪದ್ಮಶ್ರೀ ಪ್ರಶಸ್ತಿ ವಿಜೇತ ಹರೇಕಳ ಹಾಜಬ್ಬ ಅತಿಥಿಯಾಗಿ ಪಾಲ್ಗೊಂಡರು. ಕಾರ್ಪೊರೇಟರ್ ಅಬ್ದುಲ್ ಲತೀಫ್, ಕರ್ನಾಟಕ ಫುಟ್ಬಾಲ್ ತಂಡದ ಕೋಟ್ ಬೀಬಿ ಥೋಮಸ್, ಮಾಜಿ ಫುಟ್ಬಾಲ್ ಆಟಗಾರ ಬಿ. ಅಬ್ದುಲ್, ಹರೀಶ್ಚಂದ್ರ ಬೆಂಗ್ರೆ, ಮಜೀದ್, ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಪದಾಧಿಕಾರಿಗಳಾದ ಜಯ ಸುವರ್ಣ, ಚೇತನ್ ಬೆಂಗ್ರೆ, ಯುವರಾಜ್ ಬೆಂಗ್ರೆ, ಉಮೇಶ್ ಉಚ್ಚಿಲ, ಅನಿಲ್ ಪಿ.ವಿ., ಜೀವನ್ ಕುಮಾರ್, ಫಿರೋಝ್ ಆರೀಫ್ ಉಚ್ಚಿಲ ಉಪಸ್ಥಿತರಿದ್ದರು.

ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ. ಅಸ್ಲಂ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಹುಸೇನ್ ಬೋಳಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News