ಜಯನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ

Update: 2020-01-28 15:40 GMT

ಮಂಗಳೂರು, ಜ.28: ಮನುಷ್ಯ ಸಂಬಂಧಗಳು ತೀರಾ ವ್ಯವಹಾರಿಕವಾಗುತ್ತಿರುವ ಈಗಿನ ಸಂಕೀರ್ಣ ಬದುಕಿನಲ್ಲಿ ಒಬ್ಬರನ್ನೊಬ್ಬರು ಅರಿತುಕೊಳ್ಳುವ ಪ್ರಯತ್ನವನ್ನೇ ಮಾಡುವುದಿಲ್ಲ. ಒಂದೊಂದು ಕುಟುಂಬವೂ ಒಂದೊಂದು ದ್ವೀಪದಂತೆ ಬದುಕುತ್ತಿದೆ. ಇಂತಹ ಸಂದರ್ಭದಲ್ಲಿ ಕೂಡು ಕುಟುಂಬದ ಕಲ್ಪನೆಯನ್ನು ನಗರದಲ್ಲಿ ಸಾಕಾರಗೊಳಿಸುವಲ್ಲಿ ಜಯನಗರದ ನಿವಾಸಿಗಳು ಪ್ರಯತ್ನ ಶ್ಲಾಘನೀಯ ಎಂದು ನಿವೃತ್ತ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ನಗರದ ಮರೋಳಿ ಜಯನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ 22ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಸಹಬಾಳ್ವೆಯ ಪಾಠ ನಮ್ಮ ಮನೆಯ ವಠಾರದಿಂದಲೇ ಆಗಬೇಕು. ಆಧುನಿಕತೆಯ ಸೋಗಿನಲ್ಲಿ ಮೂಲ ಸಂಸ್ಕೃತಿಗೆ ಬೆನ್ನುಹಾಕಿ ವಿದೇಶಿ ಮಾದರಿಯನ್ನು ಅನುಸರಿಸುವ ಯುವಜನಾಂಗಕ್ಕೆ ನಿಜವಾದ ಜೀವನ ಧರ್ಮದ ಅರಿವಾಗುವುದು ನೆರೆಹೊರೆ ಯವರೊಂದಿಗೆ ಬೆರೆತು ಸಂಭ್ರಮಿಸಿದಾಗ ಮಾತ್ರ’ ಎಂದು ಭಾಸ್ಕರ ರೈ ಕುಕ್ಕುವಳ್ಳಿ ನುಡಿದರು.

ಅತಿಥಿಗಳಾಗಿ ಭಾಗವಹಿಸಿದ್ದ ಕಾರ್ಪೊರೇಟರ್ ಕೇಶವ ಎಂ. ಜಯನಗರ ಸಂಘದ ಸದಸ್ಯರಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನ ವಿತರಣೆ ಮಾಡಿದರು.

ಸಂಘದ ಗೌರವಾಧ್ಯಕ್ಷೆ ಶಶಿ ಜಯಪ್ರಕಾಶ್ ಶೆಟ್ಟಿ, ಕೋಶಾಧಿಕಾರಿ ಸೀತಾರಾಮ ಅಗಳಿ, ಜೊತೆ ಕಾರ್ಯದರ್ಶಿ ಎ.ಜೆ. ಆಳ್ವ ಉಪಸ್ಥಿತರಿದ್ದರು. ಜಯನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ, ಎನ್.ಟಿ. ರೈ ಸ್ವಾಗತಿಸಿದರು. ಉಪಾಧ್ಯಕ್ಷೆ ಮಧುರ ಎಸ್. ಶೆಟ್ಟಿ ವಂದಿಸಿದರು. ಕಾರ್ಯದರ್ಶಿ ಜಯರಾಮ ಗೌಡ ಗುಡ್ಡೆಮನೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News