ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣ: ಆದಿತ್ಯ ರಾವ್ ವ್ಯವಹರಿಸಿದ್ದ ಸ್ಥಳಗಳಲ್ಲಿ ಮುಂದುವರಿದ ತನಿಖೆ

Update: 2020-01-28 16:03 GMT
ಆದಿತ್ಯ ರಾವ್

ಮಂಗಳೂರು, ಜ. 28: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಆದಿತ್ಯ ರಾವ್‌ನ ಬಾಡಿಗೆ ಕೊಠಡಿ, ಆತ ಕೆಲವು ವಸ್ತುಗಳನ್ನು ಖರೀದಿಸಿದ್ದ ಹಾರ್ಡ್‌ವೇರ್ ಅಂಗಡಿ ಮತ್ತು ಇನ್ನೊಂದು ಲಾಕರ್ ಹೊಂದಿದ್ದ ಬ್ಯಾಂಕ್‌ನಲ್ಲಿ ಪೊಲೀಸರು ಮಂಗಳವಾರ ಸ್ಥಳ ತನಿಖೆ ನಡೆಸಿದರು.

ಆರೋಪಿಯು ಬೆಂದೂರ್‌ನ ಬೆಥನಿ ಕಾನ್ವೆಂಟ್ ಹಿಂಭಾಗದಲ್ಲಿ ಬಾಡಿಗೆ ಕೊಠಡಿಯೊಂದರಲ್ಲಿ ನೆಲೆಸಿದ್ದ. ಅಲ್ಲಿಗೆ ಆತನನ್ನು ಕರೆದೊಯ್ದ ಎಸಿಪಿ ಕೆ.ಯು.ಬೆಳ್ಳಿಯಪ್ಪ ನೇತೃತ್ವದ ತನಿಖಾ ತಂಡ, ತೀವ್ರ ಶೋಧ ನಡೆಸಿತು. ಆ ಕೊಠಡಿಯಲ್ಲಿ ಪತ್ತೆಯಾದ ಕೆಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ಫೋಟಕ ತಯಾರಿಸಲು ಕದ್ರಿ ದ್ವಾರದ ಬಳಿಯ ಹಾರ್ಡ್‌ವೇರ್ ಅಂಗಡಿಯೊಂದರಲ್ಲಿ ಕೆಲವು ವಸ್ತುಗಳನ್ನು ಖರೀದಿಸಿರುವುದಾಗಿ ಆದಿತ್ಯ ರಾವ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಅದರಂತೆ ಪೊಲೀಸರು ಆ ಅಂಗಡಿಗೂ ಆರೋಪಿಯನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿ ಅಂಗಡಿ ಮಾಲಕರು ಮತ್ತು ನೌಕರರ ಹೇಳಿಕೆ ದಾಖಲಿಸಿಕೊಂಡರು.

ಮತ್ತೊಂದು ಲಾಕರ್ ತಪಾಸಣೆ

ಕರ್ಣಾಟಕ ಬ್ಯಾಂಕ್‌ನ ಕದ್ರಿ ಶಾಖೆಯಲ್ಲಿ ಆರೋಪಿ ಆದಿತ್ಯ ರಾವ್ ಇನ್ನೊಂದು ಲಾಕರ್ ಹೊಂದಿರುವುದು ತನಿಖೆ ವೇಳೆ ಬಹಿರಂಗಗೊಂಡಿತ್ತು. ಅಲ್ಲಿಗೂ ಆತನನ್ನು ಕರೆದೊಯ್ದ ತನಿಖಾ ತಂಡ, ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲಿ ಲಾಕರ್ ತೆರೆದರು. ಅದರಲ್ಲಿದ್ದ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News