ತಕ್ಷಶಿಲೆಯು ಭಾಷೆಗಳ ತಾಯಿಯೇ ಹೊರತು ವಿವಿ ಅಲ್ಲ: ಕೆ.ಪಿ.ರಾವ್

Update: 2020-01-28 16:34 GMT

ಉಡುಪಿ, ಜ.28: ತಕ್ಷಶಿಲೆ ವಿಶ್ವವಿದ್ಯಾನಿಲಯ ಆಗಿರಲೇ ಇಲ್ಲ. ಅಲ್ಲಿ ಋಷಿ ಅಥವಾ ಅಧ್ಯಾಪಕರ ಪರಂಪರೆ ಎಂಬುದು ಇರಲಿಲ್ಲ. ಅಲ್ಲಿ ಒಬ್ಬರು ಮುಖ್ಯಸ್ಥ ಮತ್ತು ಒಂದು ಕಾಲಘಟ್ಟ ಎಂಬುದು ಇರಲಿಲ್ಲ. ಅದು ವಿದ್ಯಾಕೇಂದ್ರ ಆಗಿತ್ತೆ ಹೊರತು ವಿಶ್ವವಿದ್ಯಾನಿಲಯ ಎಂದು ಹೇಳುವಂತಹ ಯೋಗ್ಯತೆ ಅದಕ್ಕೆ ಇರಲಿಲ್ಲ ಎಂದು ಹಿರಿಯ ವಿದ್ವಾಂಸ ನಾಡೋಜ ಪ್ರೊ. ಕೆ.ಪಿ.ರಾ್ ಹೇಳಿದ್ದಾರೆ.

ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಹಯೋಗದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮಂಗಳವಾರ ಆಯೋಜಿಸಲಾದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸಿ್ವೀಕರಿಸಿ ಅವರು ಮಾತನಾಡುತಿದ್ದರು.

ತಕ್ಷಶಿಲೆ ಒಂದು ರೀತಿಯ ಪಂಡಿತರ ಸಮ್ಮಿಲನ ಅಥವಾ ಪರಸ್ಪರರು ಮಾತ ನಾಡಲು ಅನುಕೂಲಗಳು ಇದ್ದ ಕಾಲ ಆಗಿತ್ತು. ಇದರಿಂದ ಅಲ್ಲಿ ಸಾಹಿತ್ಯ ಮತ್ತು ಭಾಷೆ ಒಂದು ರೂಪ ಪಡೆಯಲು ಸಾಧ್ಯವಾಯಿತು. ಆದುದರಿಂದ ತಕ್ಷಶಿಲೆ ವಿಶ್ವವಿದ್ಯಾನಿಲಯ ಅಲ್ಲ. ವಿಶ್ವವಿದ್ಯಾನಿಲಯಗಳ ಹಾಗೂ ಭಾಷೆಗಳ ತಾಯಿಯಾಗಿತ್ತು ಎಂದು ಅವರು ತಿಳಿಸಿದರು.

ಯಾವುದೇ ಭಾಷೆ ಸಣ್ಣದ್ದು ಅಲ್ಲ, ದೊಡ್ಡದು ಕೂಡ ಅಲ್ಲ. ಎಲ್ಲದಕ್ಕೂ ಅದರದ್ದೇ ಆದ ಸ್ಥಾನಮಾನ ಇದೆ. ಮಾತೃ ಭಾಷೆ ಎಂಬುದು ಪ್ರತಿ ಮನುಷ್ಯ ಕಲಿಯುವ ಮೊದಲ ಭಾಷೆಯಾಗಿದೆ. ಇದರ ನಂತರ ಕಲಿಯುವ ಭಾಷೆಯು ನಮ್ಮ ಮಾತೃ ಭಾಷೆಯ ಬುನಾದಿಯ ಮೇಲೆ ಕಟ್ಟಿರುತ್ತದೆ. ಒಂದು ಭಾಷೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗದಿದ್ದರೆ, ಎಂದಿಗೂ ಬೇರೆ ಯಾವುದೇ ಭಾಷೆಯನ್ನು ಕಲಿಯಲು ಸಾಧ್ಯ ಇಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ ಡಾ.ವೈದೇಹಿ ಮಾತನಾಡಿ, ಕೆ.ಪಿ. ರಾವ್ ಹಿಮಾಲಯದಂತೆ ಬೆಳೆದು ನಿಂತವರು. ಇವರು ನಮ್ಮ ನಡುವೆ ಇರುವ ವಿಸ್ಮಯ. ಕನ್ನಡ ಮಾಧ್ಯಮದಲ್ಲಿ ಕಲಿತ ಇವರನ್ನು, ಕನ್ನಡವೇ ದೊಡ್ಡ ವ್ಯಕ್ತಿಯನ್ನಾಗಿ ರೂಪಿಸಿದೆ. ದುಡ್ಡಿಗೆ ಮಾರಿ ಹೋಗುವ ಇಂದಿನ ಜಗತ್ತಿನಲ್ಲಿ ಇವರು ಅದನ್ನು ಮೀರಿ ನಿಂತಿದ್ದಾರೆ ಎಂದರು.

ಕೆಪಿ ರಾವ್ ನೀಡಿದ ಕನ್ನಡ ಶಬ್ದ ತಂತ್ರಾಂಶ ಇಡೀ ಕನ್ನಡ ಸಹಸ್ರ ಲೋಕಕ್ಕೆ ನೀಡಿದ ದೊಡ್ಡ ಕೊಡುಗೆ. ಕನ್ನಡ ಭಾಷಾ ಪ್ರೀತಿಯಿಂದ ಅವರು ಇಷ್ಟು ದೊಡ್ಡ ಸಾಧನೆ ಮಾಡಿದರು. ಇಂದು ಸಾಹಿತ್ಯದ ಹಸಿವು ಕಡಿಮೆ ಆಗಿದೆ. ಸಂಗೀತ, ಓದು, ಸಾಹಿತ್ಯದ ಹಸಿವೇ ಇಲ್ಲವಾಗಿದೆ. ಓದುವ, ತಿಳಿಯುವ ಕೇಳುವ ಹಸಿವು ಇದ್ದಾಗ ಮಾತ್ರ ದೊಡ್ಡ ಸಾಧನೆ ಮಾಡಲು ಸಾಧ್ಯ ಎಂದು ಅವರು ತಿಳಿಸಿದರು.

ಮಣಿಪಾಲ ಮಾಹೆಯ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ವರದೇಶಿ ಹಿರೇಗಂಗೆ ಅಭಿನಂದನಾ ಭಾಷಣ ಮಾಡಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ, ಸಂಸ್ಕೃತಿ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ.ಶಂಕರ್ ಮುಖ್ಯ ಅತಿಥಿಗಳಾಗಿದ್ದರು.

ಈ ಸಂದರ್ಭ ಸಾಧಕ ಕೆ.ಪಿ.ರಾವ್ ಜೊತೆ ಸಂವಾದ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಶಿಲ್ಪಾಜೋಶಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಅಧ್ಯಕ್ಷತೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸುರೇಂದ್ರ ಅಡಿಗ ಉಪಸ್ಥಿತಿಯಲ್ಲಿ ಜಿಲ್ಲಾ ಕವಿಗೋಷ್ಠಿ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News