ತಂಬಾಕು ಉತ್ಪನ್ನದ ದುಷ್ಪರಿಣಾಮಗಳ ಅರಿವಿಗೆ ಗುಲಾಬಿ ಆಂದೋಲನ

Update: 2020-01-28 16:40 GMT

ಉಡುಪಿ, ಜ.28: ತಂಬಾಕು ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಮಂಗಳವಾರ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಆದಿಉಡುಪಿ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಇವರ ಸಂಯುಕ್ತಾ ಶ್ರಯದಲ್ಲಿ ಆದಿಉಡುಪಿ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಗುಲಾಬಿ ಆಂದೋಲನ ಮ್ತು ಜಾಥಾ ಕಾರ್ಯಕ್ರಮ ನಡೆಯಿತು.

ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರತ್ನ ಮಾತನಾಡಿ, ದೇಶದಲ್ಲಿ 2016 ರಲ್ಲಿ ಗುಲಾಬಿ ಆಂದೋಲನಕ್ಕೆ ಚಾಲನೆ ನೀಡಲಾಗಿದ್ದು, ಶಾಲಾ ಮಕ್ಕಳ ಸಹಾಯದಿಂದ ತಂಬಾಕುವಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮವನ್ನು ಪ್ರಪ್ರಥಮವಾಗಿ ಉಡುಪಿ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತರಲಾಯಿತು. ಈ ಆಂದೋಲನದಲ್ಲಿ ಜಿಲ್ಲೆಯ 1200 ಶಾಲೆಗಳ ಮಕ್ಕಳು ಹುಮ್ಮಸ್ಸಿನಿಂದ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ ಎಂದರು.

ಪುಟ್ಟ ಮಕ್ಕಳು ಶಾಲಾ-ಕಾಲೇಜಿನ 100 ಮೀ.ವ್ಯಾಪ್ತಿಯ ಅಂಗಡಿಗಳಿಗೆ ತೆರಳಿ ಅಂಗಡಿ ಮಾಲಕರಲ್ಲಿ ತಂಬಾಕು ಮಾರದಂತೆ ಮನವಿ ಮಾಡಿ ಕೊಂಡಿದ್ದಾರೆ. ತಂಬಾಕು ಉದ್ಯಮವು ಲಕ್ಷಾಂತರ ಜನರಿಗೆ ಉದ್ಯೋಗ ನೀಡುತ್ತಿರುವುದರಿಂದ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡದೆ, ಒಂದೇ ಬಾರಿಗೆ ತಂಬಾಕನ್ನು ಸಂಪೂರ್ಣವಾಗಿ ನಿಷೇಧಿಸುವುದು ಸಾಧ್ಯವಿಲ್ಲ. ಮೊದಲಿಗೆ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿ ಹಂತ ಹಂತವಾಗಿ ಜನರು ತಂಬಾಕು ಉತ್ಪನ್ನಗಳನ್ನು ತ್ಯಜಿಸುವಂತೆ ಮನವೊಲಿಸಲಾಗುತ್ತಿದೆ ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವುದು ಮತ್ತು ಶಾಲಾ-ಕಾಲೇಜು ಗಳ 100 ಮೀ.ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಗಳನ್ನು ಮಾರಾಟ ಮಾಡು ವುದು ನಿಷಿದ್ಧ. ಮಕ್ಕಳ ಮೂಲಕ ಜಾಗೃತಿ ಮೂಡಿಸಿದಾಗ ಅದರ ಪರಿಣಾಮ ಹೆಚ್ಚಿರುತ್ತದೆ. ಮಕ್ಕಳು ಮನೆಯ ಹಿರಿಯರಿಗೆ ತಂಬಾಕು ಉತ್ಪನ್ನಗಳಿಂದ ದೂರವಿರುವಂತೆ ಕಿವಿಮಾತು ಹೇಳಬೇಕು ಎಂದರು.

ನಗರಸಭಾ ಸದಸ್ಯೆ ಸವಿತಾ ಹರೀಶ್‌ರಾಮ್ ಜಾಥಾವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಆನಂದ್‌ಗೌಡ, ಹಿರಿಯ ಆರೋಗ್ಯ ಮೇಲ್ವಿಚಾರಕ ದೇವಪ್ಪ ಪಟಗಾರ್, ಜಿಲ್ಲಾ ಸಂಯೋಜಕ ಡಾ. ಅಪಾನ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಕವಿತಾ ಸ್ವಾಗತಿಸಿದರು. ಅಧ್ಯಾಪಕ ರಘುರಾಮ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News