ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಫಲಾನುಭಗಳಿಗೆ ಆರ್ಥಿಕ ನೆರವು

Update: 2020-01-28 17:20 GMT

ಮಂಗಳೂರು, ಜ.28: ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ 112 ಮನೆಗಳ ನಿರ್ಮಾಣಕ್ಕೆ ಆರ್ಥಿಕ ಸಹಾಯದ ಜತೆಗೆ 2019-20ನೆ ಸಾಲಿನ 10 ತಿಂಗಳ ಅವಧಿಯಲ್ಲಿ ಸಮಾಜದ ಅರ್ಹರಿಗೆ 1.52 ಕೋ.ರೂ.ಗೂ ಮಿಕ್ಕಿದ ಸಹಾಯ ಧನವನ್ನು ವಿತರಿಸಲಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ ತಿಳಿಸಿದರು.

ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿಯ ಗೀತಾ ಎಸ್.ಎಂ.ಶೆಟ್ಟಿ ಸಭಾಭವನದಲ್ಲಿ ಇತ್ತೀಚೆಗೆ ಜರುಗಿದ ಜಾಗತಿಕ ಬಂಟರ ಸಂಘ ಗಳ ಒಕ್ಕೂಟದ ಆಡಳಿತ ಮಂಡಳಿಯ ಸದಸ್ಯರ ಸಭೆಯಲ್ಲಿ ಹತ್ತು ಮಂದಿಗೆ ಮದುವೆಗೆ ನೆರವು, 21 ಮಂದಿಯ ವೈದ್ಯಕೀಯ ಚಿಕಿತ್ಸೆಗೆ ಹಾಗೂ ಮನೆ ನಿರ್ಮಾಣಕ್ಕೆ 33 ಮಂದಿ ಫಲಾನುಭವಿಗಳಿಗೆ ಚೆಕ್ ವಿತರಿಸಿ ಅವರು ಮಾತನಾಡಿದರು.

ಬಂಟ ಸಮಾಜದಲ್ಲಿರುವ ಬಡ ಕುಟುಂಬ ಸದಸ್ಯರಿಗೆ ಮದುವೆಗೆ, ಶಿಕ್ಷಣಕ್ಕೆ, ಮನೆ ಕಟ್ಟಲು ಹಾಗೂ ವೈದ್ಯಕೀಯ ಸಂಬಂಧಿಸಿ ದಂತೆ ಸಾವಿವರಾರು ಅರ್ಜಿಗಳು ಬರುತ್ತಿವೆ. ಒಕ್ಕೂಟಕ್ಕೆ ಬರುವ ಪ್ರತಿಯೊಂದು ಅರ್ಜಿಗಳನ್ನು ಪರಿಶೀಲಿಸಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅರ್ಹರಿಗೆ ನೆರವು ನೀಡುತ್ತಿದೆ. ದಾನಿಗಳಿಂದ ಸಂಗ್ರಹಿಸುವ ಹಣ ಬಡವರ ಕಷ್ಟಗಳಿಗೆ ನೆರವಾಗಬೇಕು ಎಂಬ ಉದ್ದೇಶವನ್ನು ಒಕ್ಕೂಟ ಹೊಂದಿದೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.

ಈಗಾಗಲೇ ಕರ್ನಿರೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ ಒಂದು ಎಕ್ರೆ ಜಾಗವನ್ನು ಒಕ್ಕೂಟಕ್ಕೆ ಉಚಿತವಾಗಿ ನೀಡಿದ್ದು, ಈ ಜಾಗದಲ್ಲಿ ಮನೆ ಇಲ್ಲದ ಕುಟುಂಬ ಸದಸ್ಯರಿಗೆ ಮನೆ ಕಟ್ಟಿಕೊಡುವ ಯೋಜನೆಯನ್ನು ಹಾಕಲಾಗಿದೆ. ವಿದ್ಯಾಭ್ಯಾಸಕ್ಕೆ, ಮದುವೆಗೆ ಅತೀ ಹೆಚ್ಚಿನ ಅರ್ಜಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಶಾಶ್ವತ ಯೋಜನೆಗೆ ರೂಪುರೇಶೆಗಳನ್ನು ಹಾಕಲಾಗಿದೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಗೌರವ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ನಿಕಟಪೂರ್ವ ಕಾರ್ಯದರ್ಶಿ ವಸಂತ ಶೆಟ್ಟಿ, ಕರ್ನಲ್ ಶರತ್ ಭಂಡಾರಿ, ಸುಂದರ ಶೆಟ್ಟಿ, ಪುಷ್ಟರಾಜು ಶೆಟ್ಟಿ ಕುಡುಂಬೂರು, ರಮೇಶ್ ಶೆಟ್ಟಿ ಕಂಕನಾಡಿ, ಜಯರಾಮ ಸಾಂತ, ಬೆಳಪು ದೇ ಪ್ರಸಾದ್ ಶೆಟ್ಟಿ ಮಾತನಾಡಿದರು.

ತುಳು ಅಕಾಡಮಿಯ ಸದಸ್ಯೆ ಜಯಲಕ್ಷ್ಮಿ ಪ್ರಸಾದ್ ರೈ, ಕ್ರೀಡಾ ಸಾಧಕ ರೋಶನ್ ಶೆಟ್ಟಿ, ವಿಜಯ ಶೆಟ್ಟಿ ಸಾಲೆತ್ತೂರು ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಂಚಾಲಕ ಉಲ್ಲಾಸ್ ಆರ್. ಶೆಟ್ಟಿ ಪೆರ್ಮುದೆ ಅವರನ್ನು ಸನ್ಮಾನಿಸಲಾುತು.

ಸಭೆಯಲ್ಲಿ ಜತೆ ಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲ್, ಸಿಎ ದಯಾಶರಣ್ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಾಲಕೃಷ್ಣ ರೈ ಕೊಲ್ಲಾಡಿ, ಸುಧಾಕರ ಪೂಂಜ ಸುರತ್ಕಲ್, ರಾಜ್ ಕುಮಾರ್ ಶೆಟ್ಟಿ ಗುರುಪುರ, ರತ್ನಾಕರ ಶೆಟ್ಟಿ ಎಕ್ಕಾರ್, ಜಿತೇಂದ್ರ ಶೆಟ್ಟಿ ಉಳ್ಳಾಲ, ಅಮರನಾಥ ಶೆಟ್ಟಿ ಸಕಲೇಶ್‌ಪುರ, ಸಂತೋಷ್ ರೈ ಸೋಮವಾರ ಪೇಟೆ, ನಾಗರಾಜ್ ಶೆಟ್ಟಿ ಹೊಸನಗರ, ಮನೋಹರ್ ಶೆಟ್ಟಿ ತೋನ್ಸೆ, ಸುನೀಲ್ ಶೆಟ್ಟಿ ಕುಂದಾಪುರ, ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News