ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಜಮಾಬಂಧಿ ಸಭೆ: ಗ್ರಾಮಸ್ಥರಿಗೂ ಮಾಹಿತಿ ನೀಡುತ್ತಿಲ್ಲ ಆರೋಪ

Update: 2020-01-28 17:48 GMT

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮ ಪಂಚಾಯತ್‍ನಲ್ಲಿ 2018-19ನೇ ಸಾಲಿನ ಲೆಕ್ಕ ಪತ್ರ ತಪಾಸಣೆಯ ಜಮಾಬಂಧಿ ಸಭೆಯು ಮಂಗಳವಾರ ನಡೆಯಿತು. ಮಾಹಿತಿಯ ಕೊರತೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮಸ್ಥರ ಕೊರತೆ ಸಭೆಯಲ್ಲಿ ಕಂಡು ಬಂದಿತ್ತಲ್ಲದೆ, ಅಧಿಕಾರಿಗಳು ಕೇವಲ ಕಾಟಾಚಾರಕ್ಕೆ ಸಭೆ ನಡೆಸಿ ಮುಗಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತು.

ಗ್ರಾ.ಪಂ. ಅಧ್ಯಕ್ಷೆ ರತಿ ಎಸ್. ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್, ಈ ಸಾಲಿನಲ್ಲಿ ನಡೆದ ಕಾಮಗಾರಿಗಳ ಪಟ್ಟಿಯನ್ನು ವಾಚಿಸಿದರು. ಅದಾದ ಕೂಡಲೇ ಜಮಾಬಂಧಿ ಅಧಿಕಾರಿಯಾಗಿದ್ದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಹೇಮಚಂದ್ರ ಮಾತನಾಡಿ, ಕಾಮಗಾರಿಗಳು ಕಳಪೆಯಾಗಿದ್ದಲ್ಲಿ, ಇನ್ನುಳಿದ ಕಡೆ ಕಾಮಗಾರಿ ನಡೆಯಬೇಕಾಗಿದ್ದಲ್ಲಿ ಇಲ್ಲಿ ತಿಳಿಸಬಹುದು ಎಂದರು. ಆದರೆ ಈ ಸಂದರ್ಭ ಸಭೆಯಲ್ಲಿದ್ದ ಬೆರಳೆಣಿಕೆಯ ಗ್ರಾಮಸ್ಥರು ತುಟಿಪಿಟಿಕ್ ಅನ್ನದಿದ್ದಾಗ ವರದಿಗೆ ಅನುಮೋದನೆ ನೀಡಿ ಸಭೆಯನ್ನು ಮುಗಿಸೋಣ ಎಂದರು.

ಈ ಸಂದರ್ಭ ಸದಸ್ಯೆ ಅನಿ ಮಿನೇಜಸ್ ಮಾತನಾಡಿ, ಕಾಮಗಾರಿಗಳು ನಡೆದ ಬಗ್ಗೆ ಪಟ್ಟಿಯನ್ನು ಬಿರುಸಿನಿಂದ ಓದಿಕೊಂಡು ಹೋದರೆ ಎಲ್ಲಿ ಯಾವ ಕಾಮಗಾರಿ ನಡೆದಿದೆ. ಅದಕ್ಕೆ ಎಷ್ಟು ಹಣ ವ್ಯಯಿಸಲಾಗಿದೆ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ. ಆದ್ದರಿಂದ ಸಭೆಯಲ್ಲಿರುವ ಸದಸ್ಯರು ಸಹಿತ ಗ್ರಾಮಸ್ಥರಿಗೆ  ಕಾಮಗಾರಿಗಳ ವರದಿಯ ಪಟ್ಟಿಯ ಪ್ರತಿಗಳನ್ನು ನೀಡಬೇಕು. ಆಗ ಪರಿಶೀಲನೆಗೆ ಅನುಕೂಲವಾಗುತ್ತದೆ ಎಂದರು. ಇದಕ್ಕೆ ಉತ್ತರಿಸಿದ ಜಮಾಬಂಧಿ ಅಧಿಕಾರಿ ಹೇಮಚಂದ್ರ ಅವರು ವರದಿಯ ಪ್ರತಿ ಎಲ್ಲರಿಗೆ ನೀಡುವ ಕ್ರಮವಿಲ್ಲ. ಬೇಕಾದವರು ಇಲ್ಲಿ ಬಂದು ಪರಿಶೀಲಿಸಬಹುದು ಎಂದಾಗ, ಮಧ್ಯಪ್ರವೇಶಿಸಿದ ಗ್ರಾ.ಪಂ. ಉಪಾಧ್ಯಕ್ಷ ಅಸ್ಕರ್ ಅಲಿ, ವರದಿಯ ಪ್ರತಿಯನ್ನು ನೀಡಬಾರದೆಂದಿಲ್ಲ. ನೀಡಿದರೆ ಎಲ್ಲರಿಗೂ ಪರಿಶೀಲನೆಗೆ ಅನುಕೂಲವಾಗುತ್ತದೆ. ಈ ಬಗ್ಗೆ ನಿರ್ಣಯ ಕೈಗೊಂಡು, ಮುಂದಿನ ಬಾರಿ ಸಭೆಯಲ್ಲಿ ಎಲ್ಲರಿಗೂ ವರದಿಯ ಪ್ರತಿ ಒದಗಿಸೋಣ ಎಂದು ಸಲಹೆ ನೀಡಿದರು. ಯಾರಲ್ಲೂ ಪ್ರಶ್ನೆಯೂ ಇರಲಿಲ್ಲ. ಪರಿಶೀಲನೆಗೂ ಮುಂದಾಗಿಲ್ಲ. ಆದ್ದರಿಂದ ವರದಿ ಓದಿದ ಕೂಡಲೇ ಅನುಮೋದನೆ ಪಡೆಯಲಾಯಿತು. ಜಮಾಬಂಧಿ ಸಭೆಯ ಎಲ್ಲಾ ಪ್ರಕ್ರಿಯೆಗಳನ್ನು ಅರ್ಧ ಗಂಟೆಯೊಳಗೆ ಮುಗಿಸಲಾಯಿತು.

ತರಬೇತಿಗೆ ಬಂದವರನ್ನು ಸಭೆಯಲ್ಲಿ ಕುಳ್ಳಿರಿಸಿದ್ದರು:

ಪಂಚಾಯತ್ ರಾಜ್ ಸಂಸ್ಥೆ ಮತ್ತು ಸ್ವಸಹಾಯ ಸಂಘಗಳ ಒಗ್ಗೂಡಿಸುವಿಕೆಯ ಉದ್ದೇಶದಿಂದ 34 ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಗ್ರಾ.ಪಂ. ಸದಸ್ಯರು, ಅಧಿಕಾರಿಗಳು ಹಾಗೂ ಸ್ವ-ಸಹಾಯ ಸಂಘದ ಸದಸ್ಯರಿಗೆ ಒಂದು ದಿನದ ಮುಖಾಮುಖಿ ತರಬೇತಿ ಕಾರ್ಯಕ್ರಮವನ್ನು ಜಮಾಬಂಧಿಯ ದಿನವೇ ನಿಗದಿಪಡಿಸಲಾಗಿತ್ತು. ಅದಕ್ಕಾಗಿ ಬಂದ ಸ್ವ-ಸಹಾಯ ಸಂಘದ ಸದಸ್ಯರನ್ನೇ ಜಮಾಬಂಧಿಯಲ್ಲಿ ಕುಳ್ಳಿರಿಸಿದ್ದರು. ಇದರಿಂದ ಸಭೆಯಲ್ಲಿ ಮಹಿಳೆಯರೇ ಕಾಣುತ್ತಿದ್ದರು. ಇದರಲ್ಲಿ ಹೆಚ್ಚಿನವರಿಗೆ ಜಮಾಬಂಧಿ ಇರುವ ಬಗ್ಗೆ ಮಾಹಿತಿಯೇ ಇರಲಿಲ್ಲ.

ಗ್ರಾ.ಪಂ. ಸದಸ್ಯರೇ ಗೈರು!

34ನೇ ನೆಕ್ಕಿಲಾಡಿ ಗ್ರಾ.ಪಂ.ನ ಜಮಾಬಂಧಿ ಸಭೆಯಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಹಾಗೂ ಮೂವರು ಸದಸ್ಯರು ಮಾತ್ರ ಸಭೆಗೆ ಹಾಜರಾಗಿದ್ದರು. ಇನ್ನುಳಿದ 6 ಸದಸ್ಯರು ಸಭೆಗೆ ಗೈರು ಹಾಜರಾಗಿದ್ದರು. ಗ್ರಾಮದ ಅಭಿವೃದ್ಧಿಯಲ್ಲಿ ಇವರಿಗಿರುವ ಇಚ್ಛಾಶಕ್ತಿಯನ್ನು ಈ ಗೈರು ಹಾಜರಿ ಎತ್ತಿ ತೋರಿಸುತ್ತಿತ್ತು.

ಗ್ರಾಮ ಪಂಚಾಯತ್ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತದೆ. ಅವುಗಳಿಗೆ ಹಣ ಬೇಕು. ಬಳಸಿದ ನಿಧಿಗೆ ಸೂಕ್ತ ಲೆಕ್ಕಪತ್ರಗಳನ್ನು ನಿರ್ವಹಿಸಬೇಕು. ನಿರ್ವಹಿಸಲಾದ ಕಾಮಗಾರಿಯ ಗುಣಮಟ್ಟಕ್ಕೂ ಖರ್ಚು ಮಾಡಿದ ಹಣಕ್ಕೂ ಹೊಂದಾಣಿಕೆಯಾಗಬೇಕು ಈ ಪ್ರಕ್ರಿಯೆಗಳನ್ನು ವರ್ಷಕ್ಕೊಮ್ಮೆ ಗ್ರಾಮಸ್ಥರ ಸಮ್ಮುಖದಲ್ಲಿ ತನಿಖೆ ನಡೆಸಿ, ತಪ್ಪು ಒಪ್ಪುಗಳನ್ನು ತಿಳಿಯುವುದೇ ಪಂಚಾಯತ್ ಜಮಾಬಂಧಿ. ಆದರೆ 34 ನೆಕ್ಕಿಲಾಡಿಯಲ್ಲಿ ನಡೆದ ಜಮಾಬಂಧಿಯು ಕೇವಲ ಕಾಟಾಚಾರಕ್ಕೆ ನಡೆಸಿದಂತಿತ್ತು. ಕಾಮಗಾರಿಗಳ ಬಗ್ಗೆ  ಗ್ರಾಮಸ್ಥರ ಪ್ರಶ್ನೆಗಳಿಂದ ಅಧಿಕಾರಿಗಳು ನುಣುಚಿಕೊಳ್ಳಲು ಈ ರೀತಿ ಜಮಾಬಂಧಿಯನ್ನು ಮಾಡಿ ಮುಗಿಸಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂತು.

ಸಭೆಯಲ್ಲಿ ಉಪಾಧ್ಯಕ್ಷ ಅಸ್ಕರ್ ಅಲಿ, ಸದಸ್ಯರಾದ ಅನಿ ಮಿನೇಜಸ್, ಬಾಬು ನಾಯ್ಕ, ಪ್ರಶಾಂತ್ ಇದ್ದರು.

ಪಂಚಾಯತ್‍ನಲ್ಲಿ ಪಾರದರ್ಶಕ ಆಡಳಿತ ತರುವ ಮಹತ್ತರ ಉದ್ದೇಶದಿಂದ ಜಮಾಬಂಧಿ ಸಭೆಯನ್ನು ರೂಪಿಸಲಾಗಿದೆ. ಇದು ಬಹಿರಂಗವಾಗಿ ಗ್ರಾಮಸ್ಥರ ಸಮಕ್ಷಮ ನಡೆಯಬೇಕು. ಆದರೆ 34 ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಗ್ರಾಮಸ್ಥರಿಗೆ ಅಧಿಕಾರಿಗಳು ಮಾಹಿತಿಯನ್ನೇ ನೀಡುತ್ತಿಲ್ಲ. ಗ್ರಾಮಸ್ಥರಿಗೆ ಜಮಾಬಂಧಿ ಸಭೆ ಇರುವ ಬಗ್ಗೆ ಹ್ಯಾಂಡ್‍ಬಿಲ್ ಹಂಚುವುದು ಅಥವಾ ಟಾಂ ಟಾಂ ಮೂಲಕ ಗ್ರಾಮದಲ್ಲಿ ಪ್ರಚಾರ ಮಾಡುವುದು ಮಾಡಬಹುದು. ಆದರೆ ಈ ಕೆಲಸ ಈ ಗ್ರಾ.ಪಂ. ನಿಂದಾಗುತ್ತಿಲ್ಲ. ಜಮಾಬಂಧಿಯಲ್ಲಿ ಗ್ರಾ.ಪಂ.ನ ಎಲ್ಲಾ ಸದಸ್ಯರು ಭಾಗವಹಿಸಬೇಕು. ಆದರೆ ಸಭೆಗಳನ್ನು ಕಡೆಗಣನೆ ಮಾಡುವ ಮೂಲಕ ಇಲ್ಲಿನ ಕೆಲವು ಸದಸ್ಯರು ಗ್ರಾ.ಪಂ. ಸದಸ್ಯರಾಗಿ ತಾವು ಮಾಡಬೇಕಾದ ಕರ್ತವ್ಯ, ಉದ್ದೇಶವನ್ನೇ ಮರೆತಂತಿದೆ. ಗ್ರಾ.ಪಂ.ನ ಕಿರಿಯ, ಸಹಾಯಕ ಎಂಜಿನಿಯರ್‍ಗಳು ಮತ್ತು ಇತರೆ ತಾಂತ್ರಿಕ ಸಿಬ್ಬಂದಿಗಳು ಜಮಾಬಂಧಿಯಲ್ಲಿ ಇರುವುದು ಕಡ್ಡಾಯವಾಗಿದ್ದರೂ, ಅವರೂ ಭಾಗವಹಿಸುತ್ತಿಲ್ಲ. ಅಧಿಕಾರಿಗಳು ಕೇವಲ ಕಾಟಾಚಾರಕ್ಕೆ ಸಭೆ ನಡೆಸುತ್ತಿದ್ದು, ಗ್ರಾಮದ ಜನರಿಗೆ ಸಭೆಯ ಬಗ್ಗೆ ಸರಿಯಾದ ಮಾಹಿತಿ ನೀಡದೇ ತರಾತುರಿಯಲ್ಲಿ ಲೆಕ್ಕ ಪತ್ರಗಳನ್ನು ಮಂಡಿಸಿ, ಅನುಮೋದನೆ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಪಂಚಾಯತ್ ರಾಜ್ ವ್ಯವಸ್ಥೆಯ ಮೂಲ ಆಶಯಕ್ಕೆ ಧಕ್ಕೆಯುಂಟಾಗುವಂತಾಗಿದೆ. 

- ಅಬ್ದುರ್ರಹ್ಮಾನ್ ಯುನಿಕ್
ಅಧ್ಯಕ್ಷರು, ನಮ್ಮೂರು- ನೆಕ್ಕಿಲಾಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News