ಕೊನೆಗೂ ಪೂರ್ಣಗೊಂಡ ಪಂಪ್‌ವೆಲ್ ಮೇಲ್ಸೇತುವೆ: ಜ.31ಕ್ಕೆ ಉದ್ಘಾಟನೆ ಸಾಧ್ಯತೆ

Update: 2020-01-29 13:06 GMT

ಮಂಗಳೂರು, ಜ.29: ಸಾರ್ವಜನಿಕವಾಗಿ ತೀವ್ರ ವಿರೋಧ, ಟೀಕೆ ಮಾತ್ರವಲ್ಲದೆ, ಟ್ರೋಲ್‌ಗೆ ಒಳಗಾಗಿದ್ದ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಕೊನೆಗೂ ಅಂತಿಮ ಹಂತಕ್ಕೆ ತಲುಪಿದ್ದು, ಜ.31ರಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳ್ಳುವುದು ಬಹುತೇಕ ಖಚಿತವಾಗಿದೆ.

ಕಳೆದ 10 ವರ್ಷಗಳಿಂದ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಕಳೆದೆರಡು ವರ್ಷಗಳಿಂದ ಉದ್ಘಾಟನೆಗೆ ಹಲವು ಗಡುವುಗಳನ್ನು ಸಂಸದ ನಳಿನ್ ಕುಮಾರ್ ಕಟೀಲ್ ನೀಡಿದ್ದರು. ಆದರೆ ಕೊನೆಗೆ ಕಳೆದ ಡಿಸೆಂಬರ್‌ನಲ್ಲಿ ಸಂಸದ ನಳಿನ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಮಗಾರಿಯ ಮೇಲುಸ್ತುವಾರಿಯನ್ನು ಜಿಲ್ಲಾಡಳಿತಕ್ಕೆ ವಹಿಸಲಾಗಿತ್ತು. ಜಿಲ್ಲಾಧಿಕಾರಿ ಸಿಂಧು ರೂಪೇಶ್ ಸಮಕ್ಷಮದಲ್ಲಿ ಗುತ್ತಿಗೆ ವಹಿಸಿಕೊಂಡಿರುವ ನವಯುಗ್ ಕಂಪನಿ ಜನವರಿ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವ ವಾಗ್ದಾನ ಮಾಡಿದ್ದರು. ಅದರಂತೆ ಇದೀಗ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಡಾಮರೀಕರಣದೊಂದಿಗೆ ಪೂರ್ಣಗೊಂಡಿದೆ.

600 ಮೀಟರ್ ಉದ್ದ ಹಾಗೂ, 20 ಮೀಟರ್ ಅಗಲ ಹೊಂದಿರುವ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿಗೆ 2010ರಲ್ಲಿ ಚಾಲನೆ ನೀಡಲಾಗಿತ್ತು. ಮೊದಲ ಆರು ವರ್ಷ ನಿಧಾನಗತಿಯಲ್ಲಿ ಸಾಗಿದ ಕಾಮಗಾರಿ ಕಳೆದ ಮೂರು ವರ್ಷಗಳಿಂದ ಕೊಂಚ ಚುರುಕು ಪಡೆಯಿತು. ಕಳೆದ ಬಾರಿ ಮಳೆಗಾಲದಲ್ಲಿ ಮತ್ತೆ ಕಾಮಗಾರಿ ಕುಂಠಿತವಾಗಿತ್ತು. ಹಾಗಿದ್ದರೂ 2019ರ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರ ಕಂಪನಿಗೆ ಸಂಸದರು ಒತ್ತಡ ಹೇರಿದ್ದರೂ ಸಾಧ್ಯವಾಗಿರಲಿಲ್ಲ.

ಕಳೆದ ಸುಮಾರು ಒಂದು ತಿಂಗಳಿನಿಂದೀಚೆಗೆ ಕಾಮಗಾರಿಯ ಮೇಲುಸ್ತುವಾರಿಯನ್ನು ಜಿಲ್ಲಾಡಳಿತ ವಹಿಸಿದ್ದು, ಪ್ರತೀ ದಿನದ ಕಾಮಗಾರಿ ಪ್ರಗತಿ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುತ್ತಿತ್ತು.

ಸಂಸದ ನಳಿನ್ ಕುಮಾರ್‌ರಿಂದ ವೀಕ್ಷಣೆ
ಸಂಸದ ನಳಿನ್ ಕುಮಾರ್ ಕಟೀಲ್‌ರವರು ಇಂದು ಶಾಸಕ ವೇದವ್ಯಾಸ ಕಾಮತ್ ಜತೆ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿವುದನ್ನು ವೀಕ್ಷಿಸಿ ಪರಿಶೀಲಿಸಿದರು.

ಈ ಸಂದರ್ಭ ಮನಪಾ ಸದಸ್ಯ ಸುಧೀರ್ ಕುಮಾರ್ ಶೆಟ್ಟಿ, ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News