ಮಧ್ಯಪ್ರಾಚ್ಯ ಶಾಂತಿ ಯೋಜನೆ ಘೋಷಿಸಿದ ಟ್ರಂಪ್: ಇಡೀ ಜೆರುಸಲೇಮ್ ಇಸ್ರೇಲ್‌ಗೆ

Update: 2020-01-29 14:46 GMT

ವಾಶಿಂಗ್ಟನ್, ಜ. 29: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ತನ್ನ ಬಹುನಿರೀಕ್ಷಿತ ಮಧ್ಯಪ್ರಾಚ್ಯ ಶಾಂತಿ ಯೋಜನೆಯನ್ನು ಘೋಷಿಸಿದ್ದಾರೆ. ಅವರ ಪ್ರಸ್ತಾಪದ ಪ್ರಕಾರ, ಜೆರುಸಲೇಮ್ ಇಸ್ರೇಲ್ ನ ಅವಿಭಜಿತ ರಾಜಧಾನಿಯಾಗಲಿದೆ.

ಅದೇ ವೇಳೆ, ಸ್ವತಂತ್ರ ಫೆಲೆಸ್ತೀನ್ ದೇಶದ ಪ್ರಸ್ತಾವವನ್ನೂ ಅವರು ಮಂಡಿಸಿದ್ದಾರೆ. ಆದರೆ, ಪಶ್ಚಿಮ ದಂಡೆಯಲ್ಲಿರುವ ಇಸ್ರೇಲಿ ವಸಾಹತುಗಳ ಮೇಲೆ ಇಸ್ರೇಲ್ ಸರಕಾರಕ್ಕೆ ಪರಮಾಧಿಕಾರವಿದೆ ಎಂದು ಹೇಳಿದ್ದಾರೆ.

ವಾಶಿಂಗ್ಟನ್‌ನಲ್ಲಿರುವ ಶ್ವೇತಭವನದಲ್ಲಿ ನಿಂತುಕೊಂಡು ಟ್ರಂಪ್ ತನ್ನ ಮಧ್ಯಪ್ರಾಚ್ಯ ಯೋಜನೆಯನ್ನು ಮಂಡಿಸಿದರು. ‘‘ನನ್ನ ಪ್ರಸ್ತಾವಗಳು ಫೆಲೆಸ್ತೀನಿಯರಿಗೆ ಲಭ್ಯವಿರುವ ಕೊನೆಯ ಅವಕಾಶವಾಗಿರಬಹುದು’’ ಎಂದು ಅವರು ಹೇಳಿದರು.

ಶಾಂತಿ ಯೋಜನೆಯು ನಕಾಶೆಯೊಂದನ್ನು ಒಳಗೊಂಡಿದೆ ಹಾಗೂ ಭೂಭಾಗದಲ್ಲಿ ರಾಜಿ ಮಾಡಿಕೊಳ್ಳಲು ಇಸ್ರೇಲ್ ಸಿದ್ಧವಿದೆ ಎಂಬುದನ್ನು ಇದು ತೋರಿಸಿದೆ ಎಂದು ಟ್ರಂಪ್ ಹೇಳಿದರು.

‘‘ಈ ನಕಾಶೆಯು ಫೆಲೆಸ್ತೀನ್ ಭೂಭಾಗವನ್ನು ದ್ವಿಗುಣಗೊಳಿಸಲಿದೆ ಹಾಗೂ ಪೂರ್ವ ಜೆರುಸಲೇಮ್‌ನಲ್ಲಿ ಫೆಲೆಸ್ತೀನ್‌ಗೆ ರಾಜಧಾನಿಯನ್ನು ಒದಗಿಸಲಿದೆ’’ ಎಂದರು. ಪೂರ್ವ ಜೆರುಸಲೇಮ್ ‌ನಲ್ಲಿರುವ ಫೆಲೆಸ್ತೀನ್ ರಾಜಧಾನಿಯಲ್ಲಿ ಅಮೆರಿಕವು ತನ್ನ ರಾಯಭಾರ ಕಚೇರಿಯನ್ನು ತೆರೆಯಲಿದೆ ಎಂದು ಟ್ರಂಪ್ ನುಡಿದರು.

ಜೆರುಸಲೇಮ್ ತಮ್ಮದು ಎಂಬುದಾಗಿ ಫೆಲೆಸ್ತೀನ್ ಮತ್ತು ಇಸ್ರೇಲ್‌ಗಳೆರಡೂ ಹೇಳುತ್ತಿವೆ. ಜೆರುಸಲೇಮ್ ಫೆಲೆಸ್ತೀನ್ ರಾಜಧಾನಿಯಾಗಬೇಕೆಂದು ಫೆಲೆಸ್ತೀನ್ ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದೆ.

ಜಗತ್ತಿನ ಅತ್ಯಂತ ಸುದೀರ್ಘ ಸಂಘರ್ಷಗಳ ಪೈಕಿ ಒಂದಾಗಿರುವ ಫೆಲೆಸ್ತೀನ್-ಇಸ್ರೇಲ್ ಸಂಘರ್ಷವನ್ನು ಪರಿಹರಿಸುವ ಉದ್ದೇಶದ ಯೋಜನೆಯ ನೀಲನಕಾಶೆಯನ್ನು ಟ್ರಂಪ್‌ರ ಅಳಿಯ ಜ್ಯಾರಿಡ್ ಕಶ್ನರ್ ನೇತೃತ್ವದಲ್ಲಿ ರೂಪಿಸಲಾಗಿತ್ತು.

ಪಿತೂರಿ: ಫೆಲೆಸ್ತೀನ್ ಅಧ್ಯಕ್ಷ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮಧ್ಯಪ್ರಾಚ್ಯ ಶಾಂತಿ ಪ್ರಸ್ತಾವಗಳನ್ನು ತಳ್ಳಿಹಾಕಿರುವ ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್, ಅದು ‘ಪಿತೂರಿ’ಯಾಗಿದೆ ಎಂದಿದ್ದಾರೆ.

‘‘ಟ್ರಂಪ್ ಮತ್ತು ನೆತನ್ಯಾಹುಗೆ ನಾನು ಹೇಳುವುದಿಷ್ಟೆ: ಜೆರುಸಲೇಮ್ ಮಾರಾಟಕ್ಕಿಲ್ಲ, ನಮ್ಮೆಲ್ಲ ಹಕ್ಕುಗಳು ಮಾರಾಟಕ್ಕಿಲ್ಲ ಹಾಗೂ ಅವುಗಳ ಬಗ್ಗೆ ಚೌಕಾಸಿಯೂ ಇಲ್ಲ. ನಿಮ್ಮ ಒಪ್ಪಂದ, ಪಿತೂರಿ ಯಶಸ್ವಿಯಾಗುವುದಿಲ್ಲ’’ ಎಂದು ಪಶ್ಚಿಮ ದಂಡೆಯಲ್ಲಿರುವ ರಮಲ್ಲಾದಿಂದ ಟೆಲಿವಶನ್‌ನಲ್ಲಿ ಮಾಡಿದ ಭಾಷಣದಲ್ಲಿ ಅಬ್ಬಾಸ್ ಹೇಳಿದರು.

‘‘ಈ ಯೋಜನೆಯನ್ನು ಅದರ ಎಲ್ಲ ರೂಪಗಳಲ್ಲಿ ವಿರೋಧಿಸಲಾಗುವುದು’’ ಎಂದು ಪಶ್ಚಿಮ ದಂಡೆಯ ನಗರ ರಮಲ್ಲಾದಲ್ಲಿ ವಿವಿಧ ಫೆಲೆಸ್ತೀನ್ ಬಣಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಅವರು ಹೇಳಿದರು. ‘‘ನಮ್ಮ ಜನರು ಇದನ್ನು ಇತಿಹಾಸದ ಕಸದಬುಟ್ಟಿಗೆ ಎಸೆಯಲಿದ್ದಾರೆ ಎಂದರು.

ಯುರೋಪ್‌ನಿಂದ ನೀರಸ ಪ್ರತಿಕ್ರಿಯೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮಧ್ಯಪ್ರಾಚ್ಯ ಶಾಂತಿ ಯೋಜನೆಗೆ ಯುರೋಪ್ ಮತ್ತು ವಿಶ್ವಸಂಸ್ಥೆ ನೀರಸವಾಗಿ ಪ್ರತಿಕ್ರಿಯಿಸಿವೆ. ಅದೇ ವೇಳೆ, ಪ್ರಮುಖ ಮುಸ್ಲಿಮ್ ದೇಶಗಳು ಯೋಜನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಫೆಲೆಸ್ತೀನಿಯರಿಗೆ ವಿಶ್ವಾಸದ್ರೋಹ ಮಾಡಲಾಗಿದೆ ಎಂದಿವೆ.

ಟ್ರಂಪ್ ಪ್ರಸ್ತಾವಗಳನ್ನು ಐರೋಪ್ಯ ಒಕ್ಕೂಟವು ಅಧ್ಯಯನ ಮಾಡಲಿದೆ ಎಂದು ಒಕ್ಕೂಟದ ರಾಜತಾಂತ್ರಿಕ ಜೋಸೆಫ್ ಬೊರೆಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News