ನಾಟ್ಯ ವಿದುಷಿ ವಾಣಿಶ್ರೀ ರಂಗಪ್ರವೇಶ
ಮಂಗಳೂರು, ಜ.30: ನಗರದ ಸನಾತನ ನಾಟ್ಯಾಲಯದ ವಿದ್ಯಾರ್ಥಿನಿ, ನಾಟ್ಯ ವಿದುಷಿ ವಾಣಿಶ್ರೀ ವಿ. ಅವರ ರಂಗಪ್ರವೇಶ ಹಾಗೂ ಗುರುನಮನ ಕಾರ್ಯಕ್ರಮ ಕಂಕನಾಡಿಯ ಶ್ರೀಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಗುರುವಾರ ನಡೆಯಿತು.
ವೇದಮೂರ್ತಿ ಶುಳುವಾಲುಮೂಲೆ ಶಿವಸುಬ್ರಹ್ಮಣ್ಯ ಭಟ್‌ರ ಪೌರೋಹಿತ್ಯದಲ್ಲಿ ವೈದಿಕ ವಿಧಿ ವಿಧಾನದೊಂದಿಗೆ ಗುರುಕಾಣಿಕೆ ಸಲ್ಲಿಸಲಾಯಿತು.
ನೃತ್ಯಗುರು, ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ನಾಟ್ಯ ವಿದುಷಿ ಶ್ರೀಲತಾ ನಾಗರಾಜ್ ಅವರಿಂದ ಗೆಜ್ಜೆ ಪ್ರದಾನ ಕಾರ್ಯಕ್ರಮ ನಡೆಯಿತು. ಬಳಿಕ ವಾಣಿಶ್ರೀ ಅವರಿಂದ ರಂಗಪ್ರವೇಶದ ಅಂಗವಾಗಿ ದೇವಸ್ಥಾನದ ಅಷ್ಟದಿಕ್ಕುಗಳಲ್ಲಿ ಹಾಗೂ ದೇವರ ಸನ್ನಿಧಿಯಲ್ಲಿ ನೃತ್ಯಾರ್ಪಣ ಸೇವೆ ನೆರವೇರಿತು. ನಂತರ ದೇವಸ್ಥಾನದ ಹೊರಾಂಗಣದ ವೇದಿಕೆಯಲ್ಲಿ ವಾಣಿಶ್ರೀ ಅವರಿಂದ ಭರತನಾಟ್ಯ ರಂಗಪ್ರವೇಶ ನಡೆಯಿತು.
ವಿದುಷಿ ಶಾರದಾ ಮಣಿಶೇಖರ್ ನಟುವಾಂಗ, ವಸುಧಾ ಕೋಳಿಕ್ಕಜೆ ಹಾಡುಗಾರಿಕೆ, ವಿದ್ವಾನ್ ರಾಜನ್ ಪಯ್ಯನ್ನೂರು ಮೃದಂಗ, ವೇಣುವಾದನದಲ್ಲಿ ಅಭಿಷೇಕ್ ಸಾಥ್ ನೀಡಿದರು.
ವಾಣಿಶ್ರೀ ಅವರ ತಾಯಿ ಮಮತಾ ಶಂಕರನಾರಾಯಣ ಭಟ್, ಪೋಷಕರಾದ ಮಂಜುನಾಥ ಭಟ್ ಮತ್ತು ಸೌಮ್ಯ ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು.
...