×
Ad

ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ಸಿಕ್ಕರಷ್ಟೇ ದೇಶ ಸುಂದರ: ವಂ. ಲಾರೆನ್ಸ್ ಮುಕ್ಕುಯಿ

Update: 2020-01-31 00:13 IST

ಬೆಳ್ತಂಗಡಿ: ದೇಶದ ಎಲ್ಲ ವರ್ಗದ ಜನರಿಗೂ ಸಾಮಾಜಿಕ ನ್ಯಾಯ ಸಿಕ್ಕಿದಾಗ ಮಾತ್ರ ದೇಶ ಸುಂದರವಾಗಲು ಸಾಧ್ಯ. ನಮಗೆ ಬೇಕಾಗಿರುವುದು ಕೇವಲ ಆರ್ಥಿಕ ಸುಭಧ್ರತೆ ಮಾತ್ರವಲ್ಲ ಶಾಂತಿ, ಸೌಹಾರ್ಧತೆ, ನೆಮ್ಮದಿ, ಪ್ರೀತಿ, ಭಾತೃತ್ವವೂ ಬೇಕಾಗಿದೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧಮಾಧ್ಯಕ್ಷರಾದ ವಂ. ಲಾರೆನ್ಸ್ ಮುಕ್ಕುಯಿ ಹೇಳಿದರು. 

ಅವರು ಬೆಳ್ತಂಗಡಿಯಲ್ಲಿ ಗುರುವಾರ ಸೌಹಾರ್ಧ ವೇದಿಕೆಯ ವತಿಯಿಂದ ನಡೆದ ಶಾಂತಿಗಾಗಿ ನಡಿಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಗಾಂಧಿಯವರು ವಿಶ್ವ ಮಾನವರಾಗಿ ಬೆಳದವರು. ಸತ್ಯ ಸ್ಥಾಪನೆಗಾಗಿ ಆತ್ಮಬಲದಿಂದ ಶಾಂತಿಯುತ ಹೋರಾಟ ನಡೆಸಿದ್ದರು. ಅವರ ಸತ್ಯಾಗ್ರಹ ಬಾಂಬು, ಗುಂಡು ಸಂಘರ್ಷವಾಗಿರಲಿಲ್ಲ. ಅವರು ಅಹಿಂಸೆಯ ಶಾಂತಿಯ ಮೂಲಕವಾಗಿ ಜಗತ್ತನ್ನು ಗೆದ್ದರು. ಅವರ ಆದರ್ಶಗಳು ಯುವ ಪೀಳಿಗೆಗೂ ತಲುಪಬೇಕಾಗಿದೆ ಎಂದರು. 

ಶಾಂತಿ ಸಂದೇಶ ನೀಡಿದ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಧರ್ಮದ ಹೆಸರಿನಲಿ, ರಾಜಕೀಯದ ಹೆಸರಿನಲ್ಲ್ಲಿ ನಾವು ಅತ್ಯಂತ ಕೆಟ್ಟದ್ದಾಗಿ ಮಾತನಾಡುತ್ತಾ ಪರಸ್ಪರ ನಿಂದಿಸಿಕೊಳ್ಳುತ್ತಿದ್ದೇವೆ. ಪ್ರಜಾಪ್ರಭುತ್ವವೆಂಬುದು ನಿಂದಿಸುವುದಕ್ಕೆ ಕೆಸರೆರೆಚುವುದಕ್ಕೆ ಅವಕಾಶ ನೀಡುವ ಸಾಧನವಾಗಿ ಮಾರ್ಪಡುತ್ತಿದೆ ಇದು ದುರಂತವಾಗಿದೆ ಎಂದರು. ಭಾರತ ಹಲವಾರು ಜನಾಂಗಗಳಿಂದ, ಭಾಷೆಗಳಿಂದ, ಸಂಸ್ಕೃತಿಗಳಿಂದ ಕೂಡಿದ ದೇಶವಾಗಿದೆ ಅದನ್ನು ನಿರಾಕರಿಸಲು ಸಾಧ್ಯವಿಲ್ಲ ಅದರ ನಡುವೆಯೇ ನಾವು ಏಕತೆಯನ್ನು ಸಾಧಿಸಬೇಕಾಗಿದೆ ಅದನ್ನು ಗಾಂಧೀಯವರು ಹೇಳಿದ್ದಾರೆ ಮಾಡಿ ತೋರಿಸಿದ್ದಾರೆ ಎಂದರು. 

ಈ ಸಂದರ್ಬದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಭೋಜರಾಜ ಹೆಗ್ಡೆ ಪಡಂಗಡಿ ಅವರನ್ನು ಸೌಹಾರ್ಧ ವೇದಿಕೆಯ ವತಿಯುಂದ ಸನ್ಮಾನಿಸಲಾಯಿತು. ತಾಲೂಕು ಮಹಿಳಾ ಮಡಲಗಳ ಒಕ್ಕೂಟದ ಅಧ್ಯಕ್ಷೆ ಶಾಂತಾ ಬಂಗೇರ ಮಾತನಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಿಕ್ಷಕ ಅರವಿಂದ ಚೊಕ್ಕಾಡಿ ಅವರು ಬರೆದಿರುವ “ಗಾಂಧಿ ಮೌಲ್ಯಗಳ ನಡುವಿನ ಮೌನ” ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಪುಸ್ತಕದ ಬಗ್ಗೆ ಪತ್ರಕರ್ತ ದೇವೀಪ್ರಸಾದ್ ಮಾತನಾಡಿದರು. ಸೌಹಾರ್ಧವೇದಿಕೆಯ ಉಪಾಧ್ಯಕ್ಷ ಶ್ರೀಧರ ಜಿ ಭಿಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೌಹಾರ್ಧ ವೇದಿಕೆಯ ಕಾರ್ಯದರ್ಶಿ ಬಿ. ವಿಠಲ ಶೆಟ್ಟಿ ವಂದಿಸಿದರು. 

ಬೆಳ್ತಂಗಡಿ ಅಯ್ಯಪ್ಪಗುಡಿಯಿಂದ ಹೊರಟ ಶಾಂತಿಗಾಗಿ ನಡಿಗೆ ಕಾರ್ಯಕ್ರಮಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಚಾಲನೆ ನೀಡಿದರು. ಅವರು ಮಾತನಾಡಿ  ಶಾಂತಿ, ಸೌಹಾರ್ದತೆ ಹಾಗೂ ಸಾಮರಸ್ಯದ ಸಮಾಜವನ್ನುಕಟ್ಟಲು ಸೌಹಾರ್ದ ವೇದಿಕೆಯಿಂದ ಹಮ್ಮಿಕೊಳ್ಳುವ ಕಾರ್ಯಕ್ರಮವನ್ನು ಶ್ಲಾಘಿಸಿದರು. 

ಬೆಳ್ತಂಗಡಿ ಸಂತೆಕಟ್ಟೆ ಬಳಿಯಿಂದ ಅಂಬೇಡ್ಕರ್ ಭವನದ ವರೆಗೆ ಕಾಲ್ನಾಡಿಗೆ ಜಾಥಾ ನಡೆಯಿತು. ಶ್ವೇತ ವಸ್ತ್ರಧಾರಿಗಳಾಗಿ, ಗಾಂಧೀಟೋಪಿ ಧರಿಸಿ, ಸೌಹಾರ್ದತೆಯಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. 

ಶಾಂತಿನಡಿಗೆಯಲ್ಲಿ ಸಂದರ್ಭಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ, ಮಾಜಿ ಶಾಸಕ ಕೆ.ವಸಂತ ಬಂಗೇರ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಬೋಜರಾಜ ಹೆಗ್ಡೆ ಪಡಂಗಡಿ, ವಕೀಲ ಪ್ರತಾಪಸಿಂಹ ನಾಯಕ್, ಬಿ.ಕೆ ಧನಂಜಯ ರಾವ್, ಸೌಹಾರ್ದ ವೇದಿಕೆಯ ಶ್ರೀಧರ ಜಿ.ಭಿಡೆ, ವಿಠಲ ಶೆಟ್ಟಿ, ಉಮ್ಮರ್‍ಕುಂಞಿ ನಾಡ್ಜೆ, ವಿಕಾರ್‍ಜನರಲ್ ಜೋಸೆಫ್ ವಲಿಯಪರಂಬಿಲ್, ಫಾ.ಲಾರೆನ್ಸ್ ಪಣೋಳಿಲ್,  ಫಾ.ಬಿನೋಯ್‍ ಜೋಸೆಫ್, ವಿ.ಟಿ.ಸೆಬಾಸ್ಟಿನ್, ಎಲೋಸಿಯೆಸ್ ಲೋಬೋ, ಕಾಸೀಂ ಮಲ್ಲಿಗೆ ಮನೆ, ಹಾಗೂ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News