ಕೊರೋನಾವೈರಸ್: ಅಂತಾರಾಷ್ಟ್ರೀಯ ಆರೋಗ್ಯ ತುರ್ತು ಸ್ಥಿತಿ ಘೋಷಿಸಿದ ಡಬ್ಲ್ಯುಎಚ್‌ಓ

Update: 2020-01-31 03:57 GMT

ಬೀಜಿಂಗ್, ಜ.31: ಚೀನಾದಲ್ಲಿ 213 ಮಂದಿಯನ್ನು ಬಲಿ ಪಡೆದು, 17 ರಾಷ್ಟ್ರಗಳಿಗೆ ಹರಡಿರುವ ಕೊರೋನಾ ವೈರಸ್ ದಾಳಿಯನ್ನು ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯದ ತುರ್ತು ಸ್ಥಿತಿ (ಪಿಎಚ್‌ಇಐಸಿ) ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಅದರೆ ಚೀನಾ ದೇಶಕ್ಕೆ ಪ್ರವಾಸ ಅಥವಾ ವ್ಯಾಪಾರ ನಿರ್ಬಂಧವನ್ನು ಘೋಷಿಸಿಲ್ಲ.

ಜಿನೀವಾ ಮೂಲದ ಸಂಸ್ಥೆಯ ಹಿರಿಯ ಅಧಿಕಾರಿಗಳು ಚೀನಾಗೆ ಭೇಟಿ ನೀಡಿ ಪರಿಸ್ಥಿತಿ ವೀಕ್ಷಿಸಿದ ಬಳಿಕ ಈ ಹೇಳಿಕೆ ನೀಡಿದ್ದಾರೆ. ಚೀನಾದಲ್ಲಿ ವೈರಸ್ ದಾಳಿಯಿಂದ ಮತ್ತೆ 42 ಮಂದಿ ಮೃತಪಟ್ಟಿದ್ದು, ಕೊರೋನಾ ವೈರಸ್ ದಾಳಿಗೆ ಬಲಿಯಾದವರ ಒಟ್ಟು ಸಂಖ್ಯೆ 213ನ್ನು ತಲುಪಿದೆ. ಬಹುತೇಕ ಸಾವುಗಳು ಕೇಂದ್ರ ಚೀನಾದ ಹ್ಯುಬೀ ಪ್ರಾಂತ್ಯದಲ್ಲಿ ಸಂಭವಿಸಿವೆ.

ದೇಶದಲ್ಲಿ 1200 ಮಂದಿಗೆ ಮತ್ತೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ವೈರಸ್ ಸೋಂಕಿಗೆ ಒಳಗಾದವರ ಸಂಖ್ಯೆ 9000 ದಾಟಿದೆ. ಹ್ಯುಬಿ ಪ್ರದೇಶದಲ್ಲೇ 5806 ಮಂದಿ ಸೋಂಕಿತರಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಇದಕ್ಕೂ ಮುನ್ನ ಜಿನೀವಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್ ಅಧನೊಮ್ ಗೆಬ್ರೆಯಾಸಿಸ್ ಅವರು ತುರ್ತು ಪಡೆಯ ರಹಸ್ಯ ಸಭೆ ನಡೆಸಿ, ವೈರಸ್ ಸೋಂಕನ್ನು ಅಂತಾರಾಷ್ಟ್ರೀಯ ಕಳಕಳಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದರು. 2005ರಲ್ಲಿ ಅಂತಾರಾಷ್ಟ್ರೀಯ ಆರೋಗ್ಯ ನಿಬಂಧನೆಗಳನ್ನು ಆರಂಭಿಸಿದ ಬಳಿಕ ಪಿಎಚ್‌ಇಐಸಿ ಘೋಷಿಸುತ್ತಿರುವುದು ಇದು ಆರನೇ ಬಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News