ಎಲ್ಲ ವಿಚಾರಗಳ ಬಗ್ಗೆ ಚರ್ಚೆಗೆ ಸಿದ್ಧ: ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ
ಹೊಸದಿಲ್ಲಿ, ಜ.31: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಿದ ವಿರೋಧ ಪಕ್ಷಗಳು ಕೊನೆಗೂ ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆಯಲು ಸಫಲವಾಗಿವೆ. ಸಿಎಎ, ದೆಹಲಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮುಖಂಡರು ನೀಡಿದ ಕೋಮು ಪ್ರಚೋದಕ ಹೇಳಿಕೆ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಸಂಸತ್‌ನಲ್ಲಿ ಚರ್ಚೆ ನಡೆಸಲು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.
ಸಂಸತ್ ಅಧಿವೇಶನಕ್ಕೆ ಪೂರ್ವಭಾವಿಯಾಗಿ ಗುರುವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಮೋದಿ ಈ ಭರವಸೆ ನೀಡಿದರು. ಈ ಸಭೆಯಲ್ಲಿ ಸರ್ಕಾರದ ಪ್ರತಿನಿಧಿಗಳು ಹಾಗೂ ವಿರೋಧ ಪಕ್ಷಗಳ ಮುಖಂಡರು ತಮ್ಮ ಆದ್ಯತೆಯನ್ನು ಪಟ್ಟಿ ಮಾಡಿದರು. ಕಾಂಗ್ರೆಸ್‌ನ ಗುಲಾಂ ನಬಿ ಆಝಾದ್, ಅಧೀರ್ ರಂಜನ್ ಚೌಧರಿ, ಆನಂದ್ ಶರ್ಮಾ, ಡಿಎಂಕೆ ಮುಖಂಡ ಟಿ.ಆರ್.ಬಾಲು, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ, ಎಐಎಡಿಎಂಕೆಯ ನವನೀತಕೃಷ್ಣನ್, ಬಿಜೆಡಿಯ ಪಿನಾಕಿ ಮಿಶ್ರಾ ಸೇರಿದಂತೆ 26 ಪಕ್ಷಗಳ ಮುಖಂಡರು ಭಾಗವಹಿಸಿದ್ದರು.
ಆರ್ಥಿಕ ಸ್ಥಿತಿ, ನಿರುದ್ಯೋಗ ಹಾಗೂ ಸಿಎಎ ವಿರೋಧಿ ಪ್ರತಿಭಟನೆ ಬಗ್ಗೆ ಹೆಚ್ಚಿನ ಗಮನಹರಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಮುಖಂಡರು ಸಭೆಯಲ್ಲಿ ಪ್ರತಿಪಾದಿಸಿದರು. ಜತೆಗೆ ದೆಹಲಿ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಕೋಮು ಪ್ರಚೋದಕ ಹೇಳಿಕೆಗಳನ್ನು ನೀಡುತ್ತಿರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು. ಜಮ್ಮು ಕಾಶ್ಮೀರದಲ್ಲಿ ಬಂಧಿಸಿರುವ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವಂತೆಯೂ ಆಗ್ರಹಿಸಿದರು.