ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ಎರಡು ದಿನಗಳ ಕಾಲ ದೇಶವ್ಯಾಪಿ ಬ್ಯಾಂಕ್ ಮುಷ್ಕರ
ಹೊಸದಿಲ್ಲಿ, ಜ.31: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಇಂದಿನಿಂದ ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.
ವಾರದಲ್ಲಿ 5 ದಿನ ಬ್ಯಾಂಕ್ ನಿರ್ವಹಣೆ, ಶೇ.20ರಷ್ಟು ವೇತನ ಹೆಚ್ಚಳ, ನೌಕರರ ಪಿಂಚಣಿ ಪರಿಷ್ಕರಣೆ, ಕುಟುಂಬ ಪಿಂಚಣಿ ಉತ್ತೇಜನ, ಸಿಬ್ಬಂದಿ ಕಲ್ಯಾಣ ವೇತನ ಏರಿಕೆ, ಎಲ್ಲರಿಗೂ ಒಂದೇ ಸಮಯ ನಿಗದಿಪಡಿಸಬೇಕು ಸೇರಿದಂತೆ 12 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್‌ಗಳ ನೌಕರರ ಒಕ್ಕೂಟದ ಸದಸ್ಯರು ಬೀದಿಗೆ ಇಳಿದು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ.
ಈ ಹಿಂದೆಯೂ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ 2 ದಿನಗಳ ಬ್ಯಾಂಕ್ ಮುಷ್ಕರ ಕೈಗೊಂಡಿತ್ತು. ಆಗ ತಮ್ಮ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಕೇಂದ್ರ ಹಣಕಾಸು ಕಾರ್ಯದರ್ಶಿ ಬ್ಯಾಂಕ್ ನೌಕರರ ಸಂಘಕ್ಕೆ ಭರವಸೆ ನೀಡಿದ್ದರು. ಇದುವರೆಗೂ ಕೇಂದ್ರ ಸರಕಾರ ತಾನು ನೀಡಿದ ಭರವಸೆ ಇನ್ನೂ ಈಡೇರಿಸಿಲ್ಲ. ನಮ್ಮ ಬೇಡಿಕೆ ಈಡೇರಿಕೆಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ 2 ದಿನಗಳ ಮುಷ್ಕರಕ್ಕೆ ನಿರ್ಧರಿಸಲಾಗಿದೆ. ಬೇಡಿಕೆಗಳನ್ನು ಈಡೇರಿಸದಿದ್ದರೆ, ಫೆ.11,12 ಹಾಗೂ 13ರಂದು ಮತ್ತೊಮ್ಮೆ ಮುಷ್ಕರ ನಡೆಸಲಾಗುವುದು ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಸದಸ್ಯರು ತಿಳಿಸಿದ್ದಾರೆ.