ಮಂಗಳೂರು: ಶಕ್ತಿ ಸ್ಕೂಲ್ ಫೆಸ್ಟ್‌ಗೆ ಚಾಲನೆ
ಮಂಗಳೂರು, ಜ. 31: ನಗರದ ಶಕ್ತಿ ಎಜುಕೇಶನ್ ಟ್ರಸ್ಟ್ ಅಧೀನದ ಶಕ್ತಿ ವಸತಿ ಶಾಲೆಗಳ ಎರಡು ದಿನಗಳ ಜಿಲ್ಲಾ ಮಟ್ಟದ ಅಂತರ್ ಶಾಲಾ ಸ್ಪರ್ಧೆಗಳ ‘ಶಕ್ತಿ ಫೆಸ್ಟ್’ಗೆ ಶಕ್ತಿ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಚೆನ್ನೈನ ಕಲಾ ಕ್ಷೇತ್ರದ ಭರತನಾಟ್ಯ ಕಲಾವಿದೆ ವಾಣಿ ರಾಜಗೋಪಾಲ್, ಉದ್ಯಮದಲ್ಲಿ ಯಶಸ್ವಿಯಾದ ಕೆ.ಸಿ.ನಾಯಕ್ ಶಿಕ್ಷಣ ಕ್ಷೇತ್ರದಲ್ಲೂ ಕ್ರಾಂತಿ ಮಾಡಿದ್ದಾರೆ. ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ ಮೂಲಕ ಶೈಕ್ಷಣಿಕ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ವ್ಯಕ್ತಿಗಳೇ ಸಮಾಜಕ್ಕೆ ಪ್ರೇರಣಾದಾಯಕರು. ಜಿಲ್ಲಾ ಮಟ್ಟದ ಅಂತರ್ ಶಾಲಾ ಸ್ಪರ್ಧೆಗಳಲ್ಲಿ ಎಲ್ಲ ಮಕ್ಕಳೂ ಭಾಗಿಯಾಗಬೇಕು ಎಂದು ಹೇಳಿದರು.
ಕಿತ್ತಳೆ ಮಾರಾಟ ಮಾಡುತ್ತಾ ಅದರಿಂದ ಬಂದ ಹಣದಿಂದಲೇ ಬಡವರಿಗಾಗಿ ಶಾಲೆ ಕಟ್ಟಿಸಿದ ಹರೇಕಳ ಹಾಜಬ್ಬ ದೇಶಕ್ಕೆ ಮಾದರಿ. ಸಾಸಿವೆ ಕಾಳಿನಷ್ಟೂ ಸ್ವಾರ್ಥವಿಲ್ಲದ ವ್ಯಕ್ತಿ ತನ್ನ ಊರಿನ ಶಿಕ್ಷಣ ವಂಚಿತರಿಗಾಗಿ ಶಾಲೆ ಕಟ್ಟಿಸಿ, ಬೆಳೆಸಿದರು. ಎಲೆ ಮರೆಯ ಕಾಯಿಯಂತೆ ದುಡಿದ ಮಹಾನ್ ವ್ಯಕ್ತಿ ಹಾಜಬ್ಬ. ನಿಸ್ವಾರ್ಥ ವ್ಯಕ್ತಿಗಳ ಕಾರ್ಯ ಸದಾ ಕಾಲ ಸ್ಮರಣೀಯವಾಗುತ್ತದೆ ಎಂದರು.
ರಾಷ್ಟ್ರದ ನಾಲ್ಕನೇ ಪ್ರಶಸ್ತಿಯಾದ ‘ಪದ್ಮಶ್ರೀ’ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಶಕ್ತಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಶಾಲು ಹೊದಿಸಿ, ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹರೇಕಳ ಹಾಜಬ್ಬ, ನಾನೊಬ್ಬ ಸಾಮಾನ್ಯ ವ್ಯಕ್ತಿ. ಕಿತ್ತಳೆ ಮಾರುತ್ತಲೇ ಶಾಲೆ ಕಟ್ಟಿದೆ. ನಾನು ಶಿಕ್ಷಣ ವಂಚಿತನಾದೆ. ನನ್ನೂರಿನ ಜನತೆ ವಂಚಿತರಾಗದಿರಲೆಂದು ಶಾಲೆ ಕಟ್ಟುವ ಯೋಚನೆ ಬಂತು ಎಂದು ಹೇಳಿದರು.
ಕಿತ್ತಳೆ ಮಾರಲು ಬೆಳಗ್ಗೆ ಸಾಲ ಮಾಡಿಯೇ ಹಣ್ಣು ಖರೀದಿಸುತ್ತಿದೆ. ಇದರಿಂದ 20 ರಿಂದ 50 ರೂ. ಲಾಭವಾಗುತ್ತಿತ್ತು. ಇದೇ ಹಣದಲ್ಲಿ ಸ್ವಲ್ಪ ಉಳಿಸಿಕೊಂಡು ಶಾಲೆ ಕಟ್ಟಲು ಬಳಸಿಕೊಂಡೆ. ಇನ್ನು ಹಲವರು ಶಾಲೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದರು. ಎಲ್ಲರಿಗೂ ಚಿರಋಣಿಯಾಗಿದ್ದೇನೆ ಎಂದು ಶಾಲೆ ಕಟ್ಟಲು ಸಹಕರಿಸಿದ ಎಲ್ಲರನ್ನೂ ಹಾಜಬ್ಬ ಸ್ಮರಿಸಿದರು.
ಮತ್ತೋರ್ವ ಮುಖ್ಯಅತಿಥಿ ಕುಲಶೇಖರದ ಸ್ಯಾಕ್ರೆಡ್ ಹಾರ್ಟ್ ಪ್ರೌಢಶಾಲೆಯ ಮುಖ್ಯಸ್ಥೆ ಮರಿಯಾ ಎಸ್.ಎಲ್. ಡಿಸೋಜ ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶಕ್ತಿನಗರದ ಶ್ರೀಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ.ನಾಯಕ್ ಮಾತನಾಡಿ, ಮಾಧ್ಯಮ ಕ್ಷೇತ್ರವು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದಾಗಲೇ ಎಲೆಮರೆಯ ಕಾಯಿಗಳಂತಹ ‘ಅಕ್ಷರಸಂತ’ರು ಹೊರಜಗತ್ತಿಗೆ ಪರಿಚಯವಾಗುತ್ತಾರೆ. ಕಿತ್ತಳೆ ಮಾರಾಟ ಮಾಡುತ್ತಾ ಶಾಲೆ ಕಟ್ಟಲು ತನ್ನ ದುಡಿಮೆಯನ್ನೇ ವಿನಿಯೋಗಿಸಿದ ಮಹಾತ್ಮ ಹರೇಕಳ ಹಾಜಬ್ಬನವರು. ನಿಸ್ವಾರ್ಥ ಸೇವೆಯಿಂದಲೇ ಹೆಸರುವಾಸಿಯಾದ ಹಾಜಬ್ಬ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ. ಇದರಿಂದ ಪದ್ಮಶ್ರೀ ಪ್ರಶಸ್ತಿಗೆ ಗೌರವ ಹೆಚ್ಚಿದಂತಾಗಿದೆ ಎಂದರು.
ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ಅವರನ್ನು ಸಂಸ್ಥೆಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಕ್ತಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಶಕ್ತಿ ವಸತಿ ಶಾಲಾ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಕಾಲೇಜು ಪ್ರಾಚಾರ್ಯ ಪ್ರಭಾಕರ್ ಜಿ.ಎಸ್., ಸಂಸ್ಥೆಯ ಮುಖ್ಯ ಸಲಹೆಗಾರ ರಮೇಶ್ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ನೀಮಾ ಸಕ್ಸೇನಾ ಮತ್ತಿತರರು ಉಪಸ್ಥಿತರಿದ್ದರು.