‘ಉಡುಪಿ ಜಿಲ್ಲೆಯ 2,68,828 ಮಕ್ಕಳಿಗೆ ಜಂತುಹುಳು ಮಾತ್ರೆ ವಿತರಣೆ’
ಉಡುಪಿ, ಜ.31: ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗ ವಾಗಿ ಫೆ.10ರಂದು ಜಿಲ್ಲೆಯ 1ರಿಂದ 19 ವರ್ಷದೊಳಗಿನ 2,68,828 ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಆರೋಗ್ಯ ಇಲಾಖೆಯ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಂತುಹುಳು ಸಮಸ್ಯೆಯಿಂದ 1ರಿಂದ 19 ವರ್ಷದೊಳಗಿನ ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಠಿಕತೆ ಕಂಡುಬರಲಿದ್ದು, ಬೌದ್ಧಿಕ ಬೆಳವಣಿಗೆ ಕುಂಠಿತ ವಾಗುವುದರ ಜೊತೆಗೆ ಮಕ್ಕಳಲ್ಲಿ ಅನಾರೋಗ್ಯ ಸಮಸ್ಯೆ ತಲೆದೋರಲಿದೆ. ಇದರಿಂದ ಅವರ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗಲಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯ 1ರಿಂದ 19 ವರ್ಷದೊಳಗಿನ ಎಲ್ಲಾ ಸರಕಾರಿ, ಅನುದಾನಿತ, ಖಾಸಗಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳು, ಐಟಿಐಗಳ ಮೂಲಕ ಜಂತುಹುಳು ನಿವಾರಣಾ ಅಲ್ಬೆಂಡಾಜೊಲ್ ಮಾತ್ರೆ ವಿತರಿಸಲಾಗುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ತಪ್ಪದೇ ಮಾತ್ರೆಯನ್ನು ತೆಗೆದು ಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಅಂಗನವಾಡಿಯ 63,840, 1ರಿಂದ 10ನೇ ತರಗತಿಯ 1,60,315, ಪಿಯುಸಿಯ 30,100, ಶಾಲೆಯಿಂದ ಹೊರಗುಳಿದ 2,029, ಡಿಪ್ಲೊಮಾ ಕಲಿಕೆಯ 1,915, ಐಟಿಐಯ 1,706, ನರ್ಸಿಂಗ್ ಕಾಲೇಜಿನ 1,429, ಅನಾಥಾಲಯದ 92 ಮತ್ತು ಪ್ರಥಮ ವರ್ಷದ ಪದವಿಯ 7,402 ವಿದ್ಯಾಥಿಗಳು ಸೇರಿದಂತೆ ಒಟ್ಟು 2,68,828 ಮಂದಿಗೆ ಜಂತು ಹುಳು ಮಾತ್ರೆ ವಿತರಿಸಲು ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಈ ಮಾತ್ರೆಯ ಸೇವನೆಯಿಂದ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡಾ, ಡಾ.ಎಂ.ಜಿ.ರಾಮ, ಜಿಲ್ಲಾ ರೋಗವಾಹಕ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್, ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಡಿಡಿಪಿಐ ಶೇ ಶಯನ ಕಾರಿಂಜ ಉಪಸ್ಥಿತರಿದ್ದರು.