ಕೇಂದ್ರ ಸಚಿವರ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಆರ್‌ಟಿಐ: ಪ್ರಧಾನಿ ಕಚೇರಿಗೆ ಸುಪ್ರೀಂ ಕೋರ್ಟ್ ನೋಟಿಸ್

Update: 2020-01-31 15:54 GMT
Photo: PTI

ಹೊಸದಿಲ್ಲಿ, ಜ. 31: ವಿದೇಶದಿಂದ ತರಲಾಗಿದೆ ಎಂದು ನರೇಂದ್ರ ಮೋದಿ ಸರಕಾರ ಪ್ರತಿಪಾದಿಸಿದ ಹಣ ಹಾಗೂ ಕೇಂದ್ರ ಸಚಿವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಕುರಿತು ಮಾಹಿತಿ ಬಹಿರಂಗಪಡಿಸುವಂತೆ ಕೋರಿ ಐಪಿಎಸ್ ಅಧಿಕಾರಿ ಸಂಜಯ್ ಚತುರ್ವೇದಿ ಸಲ್ಲಿಸಿದ ವಿಶೇಷ ರಜಾ ಕಾಲದ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಪ್ರಧಾನಿ ಮಂತ್ರಿ ಕಚೇರಿಗೆ ಶುಕ್ರವಾರ ನೋಟಿಸು ಜಾರಿ ಮಾಡಿದೆ.

ಸುಪ್ರೀಂ ಕೋರ್ಟ್‌ನ ಈ ನೋಟಿಸಿಗೆ ಪ್ರಧಾನ ಮಂತ್ರಿ ಕಚೇರಿ ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆ ನೀಡಬೇಕಾಗಿದೆ. ಸರಕಾರದ ಉನ್ನತ ಕಚೇರಿಗಳ ಭ್ರಷ್ಟಾಚಾರವನ್ನು ಬಹಿರಂಗಪಡಿಸಿರುವುದಕ್ಕೆ ಮ್ಯಾಗ್ಸಸೆ ಪ್ರಶಸ್ತಿ ಸ್ವೀಕರಿಸಿದ ಚತುರ್ವೇದಿ ಪರವಾಗಿ ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ಹಾಗೂ ರೋಹಿತ್ ಕುಮಾರ್ ಸಿಂಗ್ ವಾದಿಸಿದರು.

ಏಕ ಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿದ ದಿಲ್ಲಿ ಉಚ್ಚ ನ್ಯಾಯಾಲಯದ ವಿಭಾಗೀಯ ನ್ಯಾಯಪೀಠದ ತೀರ್ಪುನ್ನು ಹಾಗೂ ಈ ವಿಷಯದ ಕುರಿತು ಮುಖ್ಯ ಮಾಹಿತಿ ಆಯುಕ್ತ ಮಾಹಿತಿ ನೀಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಚತುರ್ವೇದಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮನವಿ ಪ್ರಶ್ನಿಸಿದೆ.

ಸುಪ್ರೀಂ ಕೋರ್ಟ್ ಆದೇಶ ನೀಡುವಾಗ ಪ್ರಧಾನಿ ಮಂತ್ರಿ ಕಚೇರಿಯ ಯಾರೊಬ್ಬರೂ ಉಪಸ್ಥಿತಿಯಲ್ಲಿರಲಿಲ್ಲ. ಸುಪ್ರೀಂ ಕೋರ್ಟ್‌ನ ಮುಂದೆ ಈ ಪ್ರಕರಣ ವಿಚಾರಣೆಗೆ ಬರುತ್ತಿರುವುದು ಇದೇ ಮೊದಲು ಎಂದು ವಕೀಲ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಈ ಪ್ರಕರಣದಲ್ಲಿ ಮೂಲ ಅರ್ಜಿಯನ್ನು ಚತುರ್ವೇದಿ ಅವರು 2005ರ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ 2017 ಆಗಸ್ಟ್‌ನಲ್ಲಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News