ಜಿಡಿಪಿ ದರದ ಅಂದಾಜು ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ: ಆರ್ಥಿಕ ಸಮೀಕ್ಷೆ

Update: 2020-01-31 16:07 GMT

ಹೊಸದಿಲ್ಲಿ,ಜ.31: ಭಾರತದ ಜಿಡಿಪಿ ಪ್ರಗತಿದರವನ್ನು ಅತಿಯಾಗಿಯೂ ಅಂದಾಜಿಸಿಲ್ಲ, ಕೀಳಂದಾಜಿಸಿಯೂ ಇಲ್ಲ ಮತ್ತು ಬೃಹತ್ ಆರ್ಥಿಕತೆ ದತ್ತಾಂಶಗಳ ಕುರಿತು ಕಳವಳಗಳಿಗೆ ಆಧಾರವಿಲ್ಲ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದ 2019-20ನೇ ಸಾಲಿನ ಆರ್ಥಿಕ ಸಮೀಕ್ಷೆ ವರದಿಯು ಪ್ರತಿಪಾದಿಸಿದೆ.

ತನ್ಮೂಲಕ ಅಂದಾಜನ್ನು ಸಿದ್ಧಪಡಿಸುವ ವಿಧಾನದಲ್ಲಿ ಬದಲಾವಣೆಯ ಹಿನ್ನೆಲೆಯಲ್ಲಿ ಈ ದತ್ತಾಂಶಗಳ ಸತ್ಯಾಸತ್ಯತೆಯ ಕುರಿತು ಚರ್ಚೆಗಳನ್ನು ತಣ್ಣಗಾಗಿಸಲು ಪ್ರಯತ್ನಿಸಿದೆ. ಜಿಡಿಪಿಯನ್ನು ಲೆಕ್ಕ ಹಾಕುವ ವಿಧಾನದಲ್ಲಿ ಬದಲಾವಣೆಯಿಂದಾಗಿ 2011-12 ಮತ್ತು 2016-17ರ ನಡುವಿನ ಅವಧಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವನ್ನು ಸುಮಾರು ಶೇ.2.5ರಷ್ಟು ಹೆಚ್ಚಾಗಿ ಅಂದಾಜಿಸಲಾಗಿದೆ ಎಂದು ಮೋದಿ ಸರಕಾರದ ಹಿಂದಿನ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಅವರು ಇತ್ತೀಚಿಗೆ ಹೇಳಿದ್ದರು.

ಈ ಅವಧಿಗೆ ಭಾರತದ ಜಿಡಿಪಿ ಬೆಳವಣಿಗೆ ದರವು ಸುಮಾರು ಶೇ.7ರ ಅಧಿಕೃತ ಅಂದಾಜಿನ ಬದಲು ಸುಮಾರು ಶೇ.4.5ರಷ್ಟಾಗಬೇಕು ಎಂದು ಹಾರ್ವರ್ಡ್ ವಿವಿಯಲ್ಲಿ ಪ್ರಕಟಿತ ಸಂಶೋಧನಾ ಪ್ರಬಂಧದಲ್ಲಿ ಸುಬ್ರಮಣಿಯನ್ ಬೆಟ್ಟು ಮಾಡಿದ್ದರು.

 ಜಿಡಿಪಿಯು ಆರ್ಥಿಕತೆಯ ಗಾತ್ರ ಮತ್ತು ಆರೋಗ್ಯದ ಮಾನದಂಡವಾಗಿರುವುದರಿಂದ ಅದು ಹಲವಾರು ನಿರ್ಣಾಯಕ ನೀತಿ ಉಪಕ್ರಮಗಳ ಬಗ್ಗೆ ಮಾಹಿತಿ ನೀಡುತ್ತದೆ. ಅದು ಹೂಡಿಕೆಯ ಅತ್ಯುಚ್ಚ ಚಾಲಕ ಶಕ್ತಿಯಾಗಿದೆ. ಆದ್ದರಿಂದ ಜಿಡಿಪಿಯನ್ನು ಸಾಧ್ಯವಿದ್ದಷ್ಟು ನಿಖರವಾಗಿ ಲೆಕ್ಕ ಹಾಕುವುದು ಮುಖ್ಯವಾಗಿದೆ ಎಂದು ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News