×
Ad

ಕೊರೋನವೈರಸ್ ಬಗ್ಗೆ ಭಯ ಬೇಡ; ಎಚ್ಚರ ಇರಲಿ: ಸಿಂಧೂ ಬಿ.ರೂಪೇಶ್

Update: 2020-01-31 22:11 IST

ಮಂಗಳೂರು, ಜ.31: ಚೀನಾದಲ್ಲಿ ಮಾರಣ ಹೋಮಕ್ಕೆ ಕಾರಣವಾಗಿರುವ ಕೊರೋನ ವೈರಸ್ ಬಗ್ಗೆ ಜಿಲ್ಲೆಯ ಜನತೆ ಭೀತಿಗೊಳಗಾಗುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳುಸುದ್ದಿಗೆ ಕಿವಿಕೊಡದೇ ಈ ಕುರಿತು ಎಚ್ಚರಿಕೆ ಜತೆಗೆ ಸ್ವಚ್ಛತೆಯ ಕಡೆಗೆ ಗಮನ ನೀಡಿದರೆ ಯಾವುದೇ ಸಮಸ್ಯೆಯಾಗಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಕೊರೋನ ವೈರಸ್ ಕುರಿತ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಶೀತಜ್ವರ ಬರುವಂತೆಯೇ ಕೊರೋನವೈರಸ್ ಹರಡುತ್ತದೆ. ಸಾಮಾನ್ಯವಾಗಿ ಸೋಂಕಿತರು ಕೆಮ್ಮಿದಾಗ, ಸೀನಿದಾಗ ಈ ಸೋಂಕು ಹರಡುತ್ತದೆ. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮೂಗು, ಬಾಯಿ ಹೇಗೆಂದರೆ ಹಾಗೆ ಮುಟ್ಟುವುದರಿಂದಲೂ ಸೋಂಕು ಹರಡುವ ಸಾಧ್ಯತೆ ಇದೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಮಾತನಾಡಿ, 2019ರಲ್ಲಿ ನೊವೆಲ್ ಕೊರೊನಾ ವೈರಸ್ ಚೀನಾದ ವುಹಾನ್ ಪ್ರದೇಶದಲ್ಲಿ ಕಾಣಿಸಿಕೊಂಡಿತು. ಈ ಬಳಿಕ 2019 ಡಿಸೆಂಬರ್ 31ರಂದು ಚೀನಾದ ವುಹಾನ್ ಸಿಟಿಯಲ್ಲಿ ಕೊರೊನಾ ವೈರಸ್‌ನ ಪ್ರಕರಣಗಳು ದಾಖಲಾ ಯಿತು. ಗುರುವಾರ ಲೆಕ್ಕಚಾರದ ಪ್ರಕಾರ ಕೊರೊನಾ ವೈರಸ್ ಬಾದಿತರ ಸಂಖ್ಯೆ ವಿಶ್ವದಲ್ಲಿ 7818 ಪತ್ತೆಯಾಗಿದೆ. ಚೀನಾದಲ್ಲಿ 7736 ದಾಖಲಾಗಿದೆ. ಭಾರತದಲ್ಲಿ ಕೇರಳದ ವೈದ್ಯ ವಿದ್ಯಾರ್ಥಿಯಲ್ಲಿ ಕಾಣಿಸಿಕೊಂಡಿದೆ. ಇನ್ನು ಉಳಿದಂತೆ ಮುಂಬಯಿ, ಮಧ್ಯಪ್ರದೇಶ ಹಾಗೂ ಹರಿಯಾಣದಲ್ಲೂ ಕಾಣಿಸಿಕೊಂಡಿದೆ. ಮುಖ್ಯವಾಗಿ ಪ್ರಾಣಿಯಿಂದ ಪ್ರಾಣಿಗೆ, ಮನುಷ್ಯನಿಂದ ಮನುಷ್ಯನಿಗೆ ಹರಡುವ ಕುರಿತು ಮಾಹಿತಿಯಿದೆ ಎಂದರು.

ಕೊರೋನ ವೈರಸ್ ಸೋಂಕು ವಿಶ್ವದ 20ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವ್ಯಾಪಿಸಿದೆ. ಚೀನಾವೊಂದರಲ್ಲೆ 7,800ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಥೈಲ್ಯಾಂಡ್‌ನಲ್ಲಿ 14, ಜಪಾನ್ 11, ಸಿಂಗಪೂರ್ 10, ಭಾರತ ಒಬ್ಬ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಚೀನಾಕ್ಕೆ ತೆರಳಿದ್ದ ಕೇರಳದ ತ್ರಿಶ್ಯೂರ್‌ನ ಮೆಡಿಕಲ್ ವಿದ್ಯಾರ್ಥಿಗೆ ಈ ಸೋಂಕು ತಗುಲಿದೆ ಎಂದರು.

ಮುಂಬೈ, ಮಧ್ಯಪ್ರದೇಶ, ಹರಿಯಾಣ, ಕೇರಳ ಸಹಿತ ಹಲವು ರಾಜ್ಯಗಳಲ್ಲಿ 20 ಶಂಕಿತ ಪ್ರಕರಣ ಪತ್ತೆಯಾಗಿದ್ದವು. ಅವುಗಳಲ್ಲಿ ಕೇರಳದ ತ್ರಿಶ್ಯೂರ್ ಮೆಡಿಕಲ್ ವಿದ್ಯಾರ್ಥಿಗೆ ಸೋಂಕು ತಗುಲಿರುವುದು ಖಾತ್ರಿಯಾಗಿದೆ. ಆತನನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದೊಂದು ಹೊಸ ನಮೂನೆಯ ಸೋಂಕು ಆಗಿದ್ದು, ಸದ್ಯ ‘ಕೊರೋನವೈರಸ್’ ಎಂದು ನಾಮಕರಣ ಮಾಡಲಾಗಿದೆ. ಇದನ್ನು ಗುಣಪಡಿಸಲು ಇಲ್ಲಿಯವರೆಗೆ ಯಾವುದೇ ಔಷಧವನ್ನು ಕಂಡುಹಿಡಿದಿಲ್ಲ. ಸೋಂಕು ತಗುಲಿದ ವ್ಯಕ್ತಿಯು ಈ ಮೊದಲೇ ಯಾವ ರೋಗಗಳಿಂದ ಬಳಲುತ್ತಿದ್ದ ಎಂಬುದನ್ನು ಪತ್ತೆ ಹಚ್ಚಿ, ಅದಕ್ಕೆ ಚಿಕಿತ್ಸೆ ನೀಡಲಾಗುವುದು. ಮೊದಲಿನ ರೋಗಗಳು ಗುಣವಾದಲ್ಲಿ ಕೊರೋನ ಸೋಂಕು ಹರಡುವುದಕ್ಕೆ ಕಡಿವಾಣ ಬೀಳಲಿದೆ ಎಂದರು.

ಬೆಕ್ಕು, ಜಾನುವಾರು, ಒಂಟೆ, ಬಾವಲಿಗಳಿಂದಲೂ ಈ ಸೋಂಕು ತಗಲುವ ಸಾಧ್ಯತೆ ಇದೆ. ಇಂತಹ ಪ್ರಾಣಿಗಳಿಂದ ಅಂತರ ಕಾಯ್ದು ಕೊಳ್ಳಬೇಕು. ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದಲ್ಲದೆ, ಮನುಷ್ಯರಿಂದ ಮನುಷ್ಯರಿಗೂ ಸೋಂಕು ಹರಡುತ್ತದೆ. ಜನಸಂದಣಿ ಇರುವ ಪ್ರದೇಶದಿಂದ ದೂರ ಇರಬೇಕು. ಯಾವುದೇ ಕೆಲಸ ಮಾಡಿದ ನಂತರ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಕನಿಷ್ಠ 20 ಸೆಕೆಂಡ್ ಸಮಯ ಸಾಬೂನು ಬಳಸಿ ಕೈಯನ್ನು ಸ್ವಚ್ಛಗೊಳಿಸಬೇಕು. ರೋಗ ಗುಣಪಡಿಸುವುದಕ್ಕಿಂತ ಮುಂಜಾಗರೂಕತೆ ನೂರು ಪಟ್ಟು ಒಳ್ಳೆಯದು ಎಂದರು.

ಸೋಂಕು ತಗುಲಿದ ವ್ಯಕ್ತಿಯು ಗಂಭೀರವಾಗಿದರೆ ಸಾವು ಸಂಭವಿಸಬಹುದು. ಸೋಂಕಿನಿಂದ ಕಿಡ್ನಿ ವಿಫಲತೆಯಾಗಿ ಸಾವು ಸಂಭವಿಸಲೂ ಬಹುದಾಗಿದೆ. ಸೋಂಕು ಲಕ್ಷಣಗಳು ಕಂಡುಬಂದ ವ್ಯಕ್ತಿಯ ಮೂಗು, ಗಂಟಲಿನ ಸ್ರಾವದ ಲೇಪನ ಮತ್ತು ರಕ್ತದ ಮಾದರಿಯನ್ನು ಪ್ರಯೋಗ ಶಾಲೆಯಲ್ಲಿ ಪರೀಕ್ಷೆಗೆ ಒಳಪಡಿಸಿ, ಸೋಂಕನ್ನು ದೃಢಪಡಿಸಲಾಗುತ್ತದೆ. ನಿರ್ದಿಷ್ಟ ಚಿಕಿತ್ಸೆ ಇಲ್ಲದಿದ್ದರೂ ಲಕ್ಷಣ ಆಧಾರಿತ ಚಿಕಿತ್ಸೆ ನೀಡಲಾ ಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲಾಡಳಿತ ಸರ್ವ ಸಿದ್ಧತೆ: ಈಗಾಗಲೇ ಕೊರೊನಾ ವೈರಸ್ ಕುರಿತು ಸಾಕಷ್ಟು ಜಾಗೃತಿ, ಅರಿವು ನೀಡುವ ಕೆಲಸ ನಡೆಯುತ್ತಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ವಾರ್ಡ್ ವ್ಯವಸ್ಥೆ ಕೂಡ ಮಾಡಲಾಗಿದೆ. ಇದರ ಜತೆಯಲ್ಲಿ ಏರ್‌ಪೋರ್ಟ್, ರೈಲ್ವೆ ನಿಲ್ದಾಣ, ಎನ್‌ಎಂಪಿಟಿ ಬಂದರುಗಳಲ್ಲಿ ಕೂಡ ಈ ಕುರಿತು ಜಾಗೃತಿ ನೀಡುವ ಕಾರ್ಯವಾಗುತ್ತಿದೆ. ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ತಂಡ ರಚನೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿಯೂ ಐದು ಬೆಡ್‌ಗಳನ್ನು ಇದಕ್ಕಾಗಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತ ಈಗಾಗಲೇ ತಜ್ಞರ, ವೈದ್ಯರ ಜತೆಗೆ ಸಭೆ ಕೂಡ ಮಾಡಲಾಗಿದೆ. ಕೊರೊನಾ ವೈರಸ್ ಕುರಿತು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದರು.

ಸಭೆಯಲ್ಲಿ ಜಿಪಂ ಸಿಇಒ ಡಾ.ಸೆಲ್ವಮಣಿ ಆರ್., ಮಂಗಳೂರು ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಆರೋಗ್ಯ ಇಲಾಖೆ, ವಿಮಾನ ನಿಲ್ದಾಣ, ಎನ್‌ಎಂಪಿಟಿ, ರೈಲು ನಿಲ್ದಾಣದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News