×
Ad

ಕೊರೊನಾ ವೈರಸ್, ಸಂಶಯಾಸ್ಪದ ಪ್ರಕರಣ ದಾಖಲಾದರೆ ವರದಿ ನೀಡಿ: ಜಿಪಂ ಸಿಇಒ

Update: 2020-01-31 22:16 IST

ಮಂಗಳೂರು, ಜ.31: ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್‌ಗೆ ಸಂಬಂಧಪಟ್ಟಂತೆ ಸಂಶಯಾಸ್ಪದ ಪ್ರಕರಣ ದಾಖಲಾದ ತಕ್ಷಣ ವರದಿ ಮಾಡಬೇಕು ಎಂದು ಜಿಪಂ ಸಿಇಒ ಸೆಲ್ವಮಣಿ ಆರ್. ಹೇಳಿದ್ದಾರೆ.

ಕೊರೊನಾ ವೈರಸ್ ಕುರಿತು ದ.ಕ.ಜಿಪಂ ಕಾನ್ಫೆರೆನ್ಸ್ ಹಾಲ್‌ನಲ್ಲಿ ಗುರುವಾರ ನಡೆದ ದ.ಕ. ಜಿಲ್ಲೆಯ ಅಂತರ್ ಇಲಾಖಾ ಸಮನ್ವಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೊರೊನಾ ವೈರಸ್ ಬಗ್ಗೆ ಜನರು ಭಯಭೀತರಾಗುವುದು ಬೇಡ. ಈ ರೋಗಕ್ಕೆ ಸಂಬಂಧಪಟ್ಟಂತೆ ನುರಿತ ವೈದ್ಯಕೀಯ ತಂಡ ಜನರಿಗೆ ಸರಿಯಾದ ಮಾಹಿತಿ ನೀಡಿ ಅರಿವು ಮೂಡಿಸಬೇಕು. ಸಂಶಯಾಸ್ಪದ ಪ್ರಕರಣ ದಾಖಲಾದರೆ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಇಲಾಖೆಗಳು ಎಲ್ಲಾ ಕಡೆ ಸೂಕ್ತ ನಿಗಾವಹಿಸಬೇಕು ಎಂದು ಸೆಲ್ವಮಣಿ ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್ ಮಾತನಾಡಿ ಈಗಾಗಲೇ ವಿಮಾನ ಮತ್ತು ರೈಲು ನಿಲ್ದಾಣ, ನವ ಬಂದರು ಪ್ರದೇಶಗಳಲ್ಲಿ ಎಲ್.ಇ.ಡಿ. ಸ್ಕ್ರೀನ್ ಅಳವಡಿಸಲಾಗಿದ್ದು, ಆರೋಗ್ಯ ಇಲಾಖೆ ನಿಗಾ ವಹಿಸಿದೆ ಎಂದರು.

ತೀವ್ರ ಜ್ವರದ ಪ್ರಾರಂಭ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಹಾಗೂ ಭೇದಿ ಉಂಟಾಗುವುದು ಕೊರೊನಾ ಸೋಂಕಿನ ಮುಖ್ಯ ಲಕ್ಷಣಗಳಾಗಿದೆ. ಸಾಮಾನ್ಯ ಫ್ಲೂ ಹರಡುವ ರೀತಿಯಲ್ಲಿಯೇ ಕೊರೊನಾ ಹರಡುತ್ತದೆ ಹಾಗೂ ಸೋಂಕಿತರು ಕೆಮ್ಮಿದಾಗ -ಸೀನಿದಾಗ ಈ ವೈರಸ್‌ಗಳು ಹರಡುತ್ತವೆ. ವ್ಯಕ್ತಿಯ ಮೂಗು, ಗಂಟಲಿನ ಸ್ರಾವದ ಲೇಪನ ಮತ್ತು ರಕ್ತದ ಮಾದರಿಯನ್ನು ಪ್ರಯೋಗ ಶಾಲೆಯಲ್ಲಿನ ಪರೀಕ್ಷೆಗೆ ಒಳಪಡಿಸಿದಾಗ ಈ ಸೋಂಕನ್ನು ಪತ್ತೆ ಹಚ್ಚಬಹುದು. ಈ ರೋಗಕ್ಕೆ ಲಕ್ಷಣ ಆಧಾರಿತ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್ ಚಂದ್ರ ಕುಲಾಲ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಸಿಕಂದರ್ ಪಾಷಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಮತ್ತು ಅಧೀಕ್ಷಕ ಡಾ. ಜೆಸಿಂತಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News