6 ತಿಂಗಳಲ್ಲಿ ಕಾರ್ಯ ಸಾಧ್ಯತೆ ವರದಿ ಸರಕಾರಕ್ಕೆ: ಚಾರುಲತಾ
ಮಂಗಳೂರು, ಜ.31: ರಾಜ್ಯ ಸರಕಾರ ಘೋಷಿಸಿರುವ ಮಣಿಪಾಲದಿಂದ ಕೊಣಾಜೆ ವರೆಗೆ ಜ್ಞಾನ ಮತ್ತು ಆರೋಗ್ಯ ಪಥಕ್ಕೆ ಸಂಬಂಧಿಸಿ ಯೋಜನೆಯ ಅನುಷ್ಠಾನಕ್ಕೆ ಕಾರ್ಯ ಸಾಧ್ಯತಾ ವರದಿ ಸಿದ್ಧಪಡಿಸಿ ಆರು ತಿಂಗಳೊಳಗೆ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಕೆಯುಐಡಿಎಫ್‌ಸಿ ವ್ಯವಸ್ಥಾಪಕ ನಿರ್ದೇಶಕಿ ಚಾರುಲತಾ ಸೋಮಲ್ ಹೇಳಿದರು.
ಪ್ರಸ್ತುತ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ(ಕೆಯುಐಡಿಎಫ್‌ಸಿ)ಕ್ಕೆ ಯೋಜನೆಯ ಪ್ರಾರಂಭಿಕ ಚಟುವಟಿಕೆ ಕೈಗೆತ್ತಿಕೊಳ್ಳಲು ನಿರ್ದೇಶನ ನೀಡಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರಿನ ಹೋಟೆಲ್ ದೀಪಾ ಕಂಫರ್ಟ್ಸ್‌ನಲ್ಲಿ ಇಂದು ಮಣಿಪಾಲ-ಕೊಣಾಜೆ ಜ್ಞಾನ ಮತ್ತು ಆರೋಗ್ಯ ಪಥ ಭಾಗೀದಾರರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಈ ಯೋಜನೆಯಡಿ ಮಣಿಪಾಲ-ಕೊಣಾಜೆ ನಡುವಿನ 100 ಕಿ.ಮೀ. ವ್ಯಾಪಿಯಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆ, ಉತ್ಪಾದನಾ ಘಟಕ ಮತ್ತು ಆರೋಗ್ಯ ಸೇವೆ ಒದಗಿಸುವ ಸಂಸ್ಥೆಗಳ ಅಭಿವೃದ್ಧಿಗೆ ಮತ್ತು ಕಾರ್ಯನಿರ್ವಹಣೆಗೆ ಸೂಕ್ತ ವಾತಾವರಣ ಕಲ್ಪಿಸಲು ಪ್ರಯತ್ನಿಸಲಾಗುತ್ತದೆ. ಸಾರ್ವಜನಿಕ ಮತ್ತು ಖಾಸಗಿ ವಲಯಗಳಿಂದ ಹೂಡಿಕೆಗಳನ್ನು ನಿರೀಕ್ಷಿಸಿ, ಉತ್ತಮ ಭೌತಿಕ ಮತ್ತು ಪೂಕರ ಮೂಲ ಸೌಕರ್ಯ ಒಳಗೊಂಡು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಯೋಜನೆ ಉದ್ದೇಶ ಎಂದರು.
ಹಿಂದಿನ ಸರಕಾರದ ಬಜೆಟ್‌ನಲ್ಲಿ ಘೋಷಿಸಿದ್ದ ಈ ಯೋಜನೆಯ ಪ್ರಕ್ರಿಯೆಗಳು ಇದೀಗ ಆರಂಭವಾಗಿವೆ. ನೆಲ, ಜಲ, ಭೂ, ರೈಲ್ವೆ ಸಾರಿಗೆ ಸೌಲಭ್ಯಗಳನ್ನು ಹೊಂದಿದ್ದು, ಯಾವುದೇ ಪ್ರದೇಶದ ಅಭಿವೃದ್ಧಿಗೆ ಪೂಕರವಾಗಿದೆ. ಕಳೆದ ಬಜೆಟ್‌ನಲ್ಲಿ ಜಿಲ್ಲೆಯನ್ನು ರಿಲೀಜಿಯಸ್ ಟೂರಿಸಂ ಸರ್ಕೀಟ್ ಆಗಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿತ್ತು, ಇದೂ ಕಾರ್ಯಗತವಾಗಬೇಕು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಯು.ಟಿ.ಖಾದರ್, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಯೋಜನೆಯ ಅಧ್ಯಯನಕ್ಕೆ ನೇಮಿಸಲಾಗಿರುವ ಸಲಹಾ ಸಂಸ್ಥೆ ಪಿಡಬ್ಲುಸಿ ಮುಖ್ಯಸ್ಥ ರವೀಂದ್ರ ಉಪಸ್ಥಿತರಿದ್ದರು.
ಯೋಜನೆ ಅನುಷ್ಠಾನಕ್ಕೆ ನೆರವು
ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅವಿಭಜಿತ ಜಿಲ್ಲೆಯ ಹಿರಿಯರ ದೂರ ದೃಷ್ಟಿಯ ಕಲ್ಪನೆಗಳಿಂದಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. 50 ವರ್ಷಗಳ ಬಳಿಕ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಹೇಗಿರಬೇಕು ಎನ್ನುವುದನ್ನು ಆಗಲೇ ನಿರ್ಧರಿಸಿದ್ದರು. ಜ್ಞಾನ ಮತ್ತು ಆರೋಗ್ಯ ಪಥ ಕಾರ್ಯ ಸಾಧತಾ ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಮಟ್ಟದಲ್ಲಿ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದರು.