ಪುತ್ತೂರು; ಬಿಎಸ್ಸೆನ್ನೆಲ್ ಸಿಬ್ಬಂದಿಗಳ ಸಾಮೂಹಿಕ ಸ್ವಯಂ ನಿವೃತ್ತಿ
ಪುತ್ತೂರು; ಸಾರ್ವಜನಿಕರ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ ಪುತ್ತೂರು ವಿಭಾಗದ ಬಿಎಸ್ಸೆನ್ನೆಲ್ ಸಂಸ್ಥೆಯಲ್ಲಿ ಇದೀಗ ಸ್ವಯಂ ನಿವೃತ್ತಿಯ ಪರ್ವ ನಡೆಯುತ್ತಿದ್ದು, ಸಂಸ್ಥೆಯ 62 ಮಂದಿ ಸಿಬ್ಬಂದಿಗಳ ಪೈಕಿ 43 ಮಂದಿ ಜ.31ರಂದು ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. ಇದರಿಂದಾಗಿ ಬಿಎಸ್ಸೆನ್ನೆಲ್ ಸಂಸ್ಥೆಯು ಸಿಬ್ಬಂದಿಗಳ ಕೊರತೆಯಿಂದ ಬಳಲುವ ಸ್ಥಿತಿ ನಿರ್ಮಾಣಗೊಂಡಿದೆ. ಜೊತೆಗೆ ಜನಸಾಮಾನ್ಯರ ಸಂಪರ್ಕವನ್ನು ಕಳೆದುಕೊಳ್ಳುವ ಸಂಕಷ್ಟಕ್ಕೆ ಸಿಲುಕಿ ಕೊಂಡಿದೆ.
ಖಾಸಗಿ ನೆಟ್‍ವರ್ಕ್‍ಗಳ ಭರಾಟೆಯ ನಡುವೆ ಹಲವು ತೊಡಕುಗಳ ಮಧ್ಯೆ ಒದ್ದಾಡುತ್ತಿರುವ ಈ ಸರ್ಕಾರಿ ನೆಟ್‍ವರ್ಕ್‍ಗೆ ಸಿಬ್ಬಂದಿಗಳ ಈ ಸ್ವಯಂ ನಿವೃತ್ತಿ ದೊಡ್ಡ ಹೊಡೆತ ನೀಡಿದೆ. ಇದರಿಂದ ಜನರ ಸಂಪರ್ಕದ ಕೊಂಡಿ ಕಳಚಿಕೊಳ್ಳುವ ಸ್ಥಿತಿ ನಿರ್ಮಾಣಗೊಂಡಿದೆ. ಖಾಸಗಿ ನೆಟ್‍ವರ್ಕ್‍ಗಳು ಮುಟ್ಟದ ಎಷ್ಟೋ ಭಾಗಗಳಲ್ಲಿ ಬಿಎಸ್ಸೆನ್ನೆಲ್ ಇಂದೂ ಕೂಡಾ ಅನಿವಾರ್ಯವಾದ ಸಂಪರ್ಕ ಸೇತುವೆಯಾಗಿದ್ದು, ಸೀಮಿತ ಸಿಬ್ಬಂದಿಗಳು ಜನರ ಬೇಡಿಕೆಗಳನ್ನು ಪರಿಹರಿಸುವುದು ಕಷ್ಟಸಾಧ್ಯವೆಂದಾಗಿದೆ.
ಬಿಎಸ್ಸೆನ್ನೆಲ್ ಪುತ್ತೂರು ವಿಭಾಗದಲ್ಲಿ ಒಟ್ಟು 43 ಮಂದಿ ಏಕಕಾಲದಲ್ಲಿ ಸ್ವಯಂ ನಿವೃತ್ತಿ ಪಡೆಕೊಂಡಿದ್ದಾರೆ. ಪುತ್ತೂರು, ಉಪ್ಪಿನಂಗಡಿ, ನೆಲ್ಯಾಡಿ, ಕಡಬ ವ್ಯಾಪ್ತಿಯಲ್ಲಿ ಒಟ್ಟು 62 ಮಂದಿ ಸಿಬ್ಬಂದಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಇದರಲ್ಲಿ ಇದೀಗ 43 ಮಂದಿ ಸ್ವಯಂ ನಿವೃತ್ತಿ ಯಾಗಿದ್ದಾರೆ. ಉಳಿದ 19 ಮಂದಿಯಲ್ಲಿ 8 ಮಂದಿ ಮುಂದಿನ ಮೂರು ತಿಂಗಳಲ್ಲಿ ವಯೋಸಹಜ ನಿವೃತ್ತಿ ಪಡೆಯಲಿದ್ದಾರೆ. ಹಾಗಾಗಿ ಕೇವಲ 11 ಮಂದಿ ಮಾತ್ರ ಸಂಸ್ಥೆಯಲ್ಲಿ ಕರ್ತವ್ಯಪಾಲನೆ ನಡೆಸಲು ಉಳಿಯಲಿದ್ದಾರೆ. 63 ಮಂದಿ ನಿರ್ವಹಣೆ ಮಾಡುತ್ತಿದ್ದ ಕೆಲಸಗಳನ್ನು ಕೇವಲ 11 ಮಂದಿ ಮಾತ್ರ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆಯ ಸವಾಲು ಬಿಎಸ್ಸೆನ್ನೆಲ್ ಸಂಸ್ಥೆಯ ಮುಂದಿದೆ.
ಪುತ್ತೂರು ನಗರದಲ್ಲಿರುವ ಬಿಎಸ್ಸೆನ್ನೆಲ್ ಪ್ರಧಾನ ಕಚೇರಿಯಲ್ಲಿ ಒಟ್ಟು 33 ಮಂದಿ ಸ್ವಯಂ ನಿವೃತ್ತಿ ಹೊಂದಲಿದ್ದಾರೆ. ಇಲ್ಲಿ ಕೇವಲ 8 ಮಂದಿ ಮಾತ್ರ ಉಳಿಯಲಿದ್ದಾರೆ. ಉಪ್ಪಿನಂಗಡಿ ಕಚೇರಿಯಲ್ಲಿ 21 ಸಿಬ್ಬಂದಿಗಳ ಪೈಕಿ 10 ಮಂದಿ ಸ್ವಯಂ ನಿವೃತ್ತಿಯಾಗಲಿದ್ದು, ಇಲ್ಲಿ 11 ಮಂದಿ ಮಾತ್ರ ಉಳಿಯಲಿದ್ದಾರೆ.
ಬಿಎಸ್ಸೆನ್ನೆಲ್ ಪುತ್ತೂರು ವಿಭಾಗದಲ್ಲಿ ಪ್ರಸ್ತುತ ಸರಿಸುಮಾರು 5500 ಸ್ಥಿರ ದೂರವಾಣಿಗಳಿದ್ದು, ಇದು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಲೇ ಬರುತ್ತಿದೆ. ವ್ಯವಸ್ಥಿತ ರೂಪದಲ್ಲಿ ಈ ಸಂಪರ್ಕ ಸೇತುವನ್ನು ಉಳಿಸಿಕಪಳ್ಳಲಾಗದ ಕಾರಣ ಜನಸಾಮಾನ್ಯರಲ್ಲಿ ಬಿಎಸ್ಸೆನ್ನೆಲ್ ಬಗ್ಗೆ ಹಲವು ಆರೋಪಗಳಿವೆ. ಹಾಗಾಗಿಯೇ ಬಹುತೇಕ ಮಂದಿ ಬಿಎಸ್ಸೆನ್ನೆಲ್ ನೆಟ್‍ವರ್ಕ್‍ನಿಂದ ದೂರವಾಗುತ್ತಿದ್ದಾರೆ. ಹಾಗಿದ್ದರೂ ಗ್ರಾಮೀಣ ಪ್ರದೇಶದ ಹಲವು ಕಡೆಗಳಲ್ಲಿ ಬಿಎಸ್ಸೆನ್ನೆಲ್ ಇನ್ನೂ ಜೀವಂತವಾಗಿದೆ. ಗ್ರಾಮೀಣ ಜನತೆಯ ಪಾಲಿಗೆ ಇದು ಅನಿವಾರ್ಯವೂ ಆಗಿದೆ. ಇದೀಗ ಸ್ವಯಂ ನಿವೃತ್ತಿ ಎಂಬ ಯೋಜನೆ ಬಿಎಸ್ಸೆನ್ನೆಲ್ ಪಾಲಿಗೆ ಮಗ್ಗುಲ ಮುಳ್ಳಾಗಲಿದೆ. ಶೇ100ರಷ್ಟು ತೊಂದರೆಯಾಗಿ ಕಾಡಲಿದೆ.
ಸ್ವಯಂ ನಿವೃತ್ತಿಯಿಂದ ಬಿಎಸ್ಸೆನ್ನೆಲ್ ಸಂಸ್ಥೆಗೆ ಪ್ರಸ್ತುತ ತೊಂದರೆಯಾದರೂ ಮುಂದೆ ಇದಕ್ಕೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಇದೆ. ಗುತ್ತಿಗೆ ಆಧಾರ ಪದ್ದತಿಯಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡುವ ಚಿಂತನೆ ಇದೆ. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗಬಹುದು. ಆನಂತರ ಮತ್ತೆ ಯಥಾ ರೀತಿಯಲ್ಲಿ ಬಿಎಸ್ಸೆನ್ನೆಲ್ ತನ್ನ ಸೇವೆ ಮುಂದುವರಿಸಲಿದೆ-
ಆನಂದ್, ಎಜಿಎಂ ಬಿಎಸ್ಸೆನ್ನಲ್ ಪ್ರಧಾನ ಕಚೇರಿ ಪುತ್ತೂರು.