ಅತ್ಯತ್ತಮ ಬಜೆಟ್: ಉಡುಪಿ ಬಿಜೆಪಿ
ಉಡುಪಿ, ಫೆ.1: ಕೇಂದ್ರದ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಇತ್ತೀಚಿನ ವರ್ಷಗಳಲ್ಲೇ ಅತ್ಯುತ್ತಮ ಬಜೆಟ್ ಆಗಿದೆ. ಬಡವರ್ಗ ಮತ್ತು ಮಧ್ಯಮ ವರ್ಗದ ಜನರಿಗೆ ಬಹಳಷ್ಟು ಕೊಡುಗೆಯನ್ನು ಈ ಬಜೆಟ್‌ನಲ್ಲಿ ನೀಡಲಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಶ್ಲಾಘಿಸಿದ್ದಾರೆ.
ಸ್ವಚ್ಚ ಭಾರತ್ ಯೋಜನೆಗೆ 12,300 ಕೋ.ರೂ. ಅನುದಾನ, ಜಲಜೀವನ್ ಮಿಶನ್‌ಗೆ 3.6ಲಕ್ಷ ಕೋಟಿ ರೂ., ಕೌಶಲ್ಯಾಭಿವೃದ್ಧಿಗೆ 3,000 ಕೋಟಿ ರೂ. ಮೀಸಲು, ಹೊಸ ಶಿಕ್ಷಣ ಕ್ಷೇತ್ರಕ್ಕೆ 99,300 ಕೋಟಿ ರೂ., 2024ರ ವೇಳೆಗೆ ದೇಶದೆಲ್ಲೆಡೆ ಜನೌಷದ ಕೇಂದ್ರಗಳ ವಿಸ್ತರಣೆ, ಕೃಷಿ ಸಾಲಕ್ಕಾಗಿ ನಬಾರ್ಡ್‌ಗೆ 15 ಲಕ್ಷ ಕೋಟಿ ಮರುಹಣಕಾಸು ಯೋಜನೆ ವಿಸ್ತರಣೆ ಮತ್ತು ಉದ್ಯೋಗ ರಂಗಕ್ಕೆ ಅನೇಕ ರಿಯಾಯಿತಿಗಳನ್ನು ನೀಡಿ ರುವ ಬಜೆಟ್ ಇದಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿರಾಶಾದಾಯಕ ಬಜೆಟ್: ಜೆಡಿಎಸ್
ಕುಸಿಯುತ್ತಿರುವ ಆರ್ಥಿಕತೆಯ ಮಧ್ಯೆ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಕೇಂದ್ರ ಹಣಕಾಸು ಸಚಿವರು ಬಜೆಟ್‌ನಲ್ಲಿ ಮಾಡಿದ್ದಾರೆ. ಪೆಟ್ರೋಲ್, ಡಿಸೇಲ್ ಮತ್ತು ಇನ್ನಿತರ ಅನೇಕ ವಸ್ತುಗಳ ಬೆಲೆಯೇರಿಕೆ ಮಾಡಿ ಜನ ಸಾಮಾನ್ಯರಿಗೆ ಉಪಯೋಗವಲ್ಲದ ಬಜೆಟ್ ಮಂಡಿಸಿ ದ್ದಾರೆ. ಉದ್ಯೋಗ ಸೃಷ್ಟಿ ಯಾವ ರೀತಿ ಎಂಬುದು ತಿಳಿಸಿಲ್ಲ. ಒಟ್ಟಾರೆ ನಿರಾಶಾದಾಯಕ ಬಜೆಟ್ ಇದಾಗಿದೆ ಎಂದು ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಟೀಕಿಸಿದ್ದಾರೆ.
ದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಬಜೆಟ್: ಕುಯಿಲಾಡಿ
ಕೇಂದ್ರದ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ ಬಜೆಟ್ ದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಹಾಗೂ ಜನಪರ ವಾದ ಬಜೆಟ್ ಆಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ನಿಯೋಜಿತ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಸೋಲಾರ್ ಚಾಲಿತ ಪಂಪ್ ಸೆಟ್, ಸೋಲಾರ್ ಪವರ್‌ಗ್ರಿಡ್ ಮೂಲಕ ವಿದ್ಯುತ್ ಉತ್ಪಾದನೆ, ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಬರಡು ಭೂಮಿಯಲ್ಲಿ ಸೋಲಾರ್ ಫಲಕಗಳ ಅಳವಡಿಕೆಗಳ ಮೂಲಕ ವಿದ್ಯುತ್ ಉತ್ಪಾದನೆಗೆ ಸರಕಾರ ಆದ್ಯತೆ, ಕೃಷಿ ಉತ್ಪನ್ನಗಳ ಸಾಗಾ ಟಕ್ಕೆ ಕೃಷಿ ಉಡಾಣಿ ಯೋಜನೆ, ಹಾಲು ಉತ್ಪಾದನೆ ದ್ವಿಗುಣಗೊಳಿಸಲು ಆದ್ಯತೆ, ಕರಾವಳಿ ಮತ್ತು ಒಳನಾಡು ಮೀನುಗಾರಿಕೆ ಬಲಪಡಿಸಲು ಅಗತ್ಯ ಕ್ರಮ ಹೀಗೆ ಅನೇಕ ಜನಪರ ಹಾಗೂ ಆರ್ಥಿಕತೆಗೆ ಹೆಚ್ಚು ಒತ್ತುಕೊಟ್ಟು ಮಂಡಿಸಿದ ಬಜೆಟ್ ಇದಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜನಸಾಮಾನ್ಯರಿಗೆ ಪೂರಕ ಬಜೆಟ್: ಬಾಬು
ಈ ಬಾರಿಯ ಕೇಂದ್ರ ಸರಕಾರದ ಬಜೆಟ್ ಜನಸಾಮಾನ್ಯ ರಿಗೆ ಪೂರಕವಾದ ಬಜೆಟ್ ಆಗಿದೆ. ಈ ಬಜೆಟ್‌ನಲ್ಲಿ ಹೊಸ ಉದ್ಯಮಿದಾರ ರಿಗೆ ಐದು ವರ್ಷ ತೆರಿಗೆಯನ್ನು ಕಡಿತಗೊಳಿಸಿರುವುದು ಯುವ ಪೀಳಿಗೆಗೆ ಹೊಸ ಉದ್ಯೋಗಕ್ಕೆ ಉತ್ತೇಜನ ಕೊಟ್ಟಂತಾಗಿದೆ ಎಂದು ಉಡುಪಿ ಜಿಪಂ ಅಧ್ಯಕ್ಷ ದಿನರ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರೀಕ್ಷೆಯನ್ನು ಈಡೇರಿಸುವಲ್ಲಿ ವಿಫಲ: ಅಶೋಕ್ ಕುಮಾರ್ ಕೊಡವೂರು
ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಜನಸಾಮಾನ್ಯರ ನಿರೀಕ್ಷೆಯನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.
ಈ ಬಜೆಟ್‌ನಲ್ಲಿ ಪ್ರಮುಖ ಉದ್ಯಮ ವಲಯಕ್ಕೆ ಉತ್ತೇಜನಕಾರಿ ಘೋಷಣೆ ಯಿಲ್ಲ. ಆದಾಯ ತೆರಿಗೆ ಇಳಿಕೆ ಬಗ್ಗೆ ಮಧ್ಯಮ ವರ್ಗದಲ್ಲಿ ಗೊಂದಲ ಸೃಷ್ಠಿಸ ಲಾಗಿದೆ. ಹೂಡಿಕೆದಾರರಿಗೆ ಲಾಭಗಳಿಕೆಯ ಯೋಜನೆಗಳು ನೀಡಿಲ್ಲ. ಕಸ್ಟಮ್ಸ್ ಸುಂಕ ಹೆಚ್ಚಳದಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಹೊರೆ ವಿಧಿಸಲಾಗಿದೆ. ಎಲ್‌ಐಸಿ ಷೇರುಗಳ ಮಾರಾಟದೊಂದಿಗೆ ಕಾಂಗ್ರೆಸ್ ಮಾಡಿದ ಸರಕಾರಿ ಸಂಸ್ಥೆ ಗಳನ್ನು ಮಾರಾಟ ಮಾಡಿದ್ದೆ ಬಿಜೆಪಿ ಸಾಧನೆ ಎಂದು ಅವರು ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ಜನಪರವಲ್ಲದ ಬಜೆಟ್: ಭಾಸ್ಕರ್ ರಾವ್
ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಿದ ರೈತರ ಆದಾಯ ದ್ವಿಗುಣವಾಗುತ್ತದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಸುಂಕ ಹೆಚ್ಚಳದಿಂದ ಹೆಚ್ಚಿನ ವಸ್ತುಗಳ ಬೆಲೆಗಳು ಏರಿಕೆಯಾಗುವುದರಿಂದ ಮಧ್ಯಮ ವರ್ಗಕ್ಕೆ ಹೆಚ್ಚಿನ ಹೊರೆಯಾಗಲಿದೆ. ಉದ್ಯೋಗ ಸೃಷ್ಟಿಗೆ ಯಾವುದೇ ಯೋಜನೆಗಳಿಲ್ಲ್ಲ. ಬಡವರ ಬಗ್ಗೆ ಕಾಳಜಿ ಇಲ್ಲದ ಬಜೆಟ್ ಇದಾಗಿದೆ. ಯಾವುದೇ ಉಪಯೋಗವೂ ಇಲ್ಲದ ಜನಪರವೂ ಅಲ್ಲದ ಬಜೆಟ್ ಇದಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಲ್ಲ ರಂಗಗಳಿಗೂ ವಿಶೇಷ ಕೊಡುಗೆ: ಭಟ್
ಇಂದು ಕೇಂದ್ರ ವಿತ್ತ ಸಚಿವೆ ಮಂಡಿಸಿದ ಬಜೆಟ್ ರೈತರಿಗೆ ವಿಶೇಷ ಉಡುಗೊರೆಯಾಗಿದೆ. ನವ ಉದ್ಯಮಿಗಳಿಗೆ, ವಿದ್ಯಾರ್ಥಿಗಳಿಗೆ, ಎಸ್‌ಸಿ ಎಸ್‌ಟಿ, ಹಿಂದುಳಿದ ವರ್ಗಗಳಿಗೆ ಅನೇಕ ಕೊಡುಗೆಗಳನ್ನು ಈ ಬಜೆಟ್ ನೀಡಿದೆ. ಕೇವಲ ಅಂಕಿಅಂಶಗಳಿಗೆ ಸೀಮಿತವಾಗದೆ ಕಾರ್ಯರೂಪಕ್ಕೆ ತರುವ ಬಜೆಟ್ ಇದಾಗಿದೆ. ಎಲ್ಲಾ ರಂಗಗಳಿಗೂ ವಿಶೇಷ ಕೊಡುಗೆ ನೀಡಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾರ್ಮಿಕರ ದುಗುಡಕ್ಕೆ ಸ್ಪಂದಿಸದ ಬಜೆಟ್: ಸಿಐಟಿಯು
ದೇಶ ಆರ್ಥಿಕ ಬಿಕ್ಕಟ್ಟಿನಿಂದ ಹೊರ ಬರದಿರುವಾಗ, ಅಭಿವೃದ್ಧಿ ದರವು ಅತ್ಯಂತ ತಳಮಟ್ಟಕ್ಕೆ ಕುಸಿದಿರುವಾಗ, ಕೈಗಾರಿಕಾ ಕಾರ್ಮಿಕರು ನಿಧಾನಗತಿಯ ಬಲಿಪಶುಗಳಾಗುತ್ತಿರುವಾಗ, ಬೆಲೆ ಏರಿಕೆ ಜನತೆಯನ್ನು ಬಾಧಿಸುತ್ತಿರುವಾಗ ಕೇಂದ್ರ ಸರಕಾರ ಮಂಡಿಸಿರುವ ಬಜೆಟ್, ದುಡಿಯುವ ಜನತೆಯ ದುಗುಡಕ್ಕೆ ಸ್ಪಂದಿಸದೆ ವಂಚಿಸಿದೆ ಎಂದು ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಟೀಕಿಸಿದೆ.
ಜೀವ ವಿಮಾ ಸಂಸ್ಥೆಯನ್ನು, 12 ರಾಷ್ಟ್ರೀಯ ಹೆದ್ದಾರಿಗಳನ್ನು ಖಾಸಗಿ ಯವರಿಗೆ ಮಾರಲು ಮುಂದಾಗಿರುವುದು ಸರಕಾರದ ದಿವಾಳಿಕೋರತನ ತೋರುತ್ತದೆ. ರಾಜ್ಯದ ಜನತೆ ನೆರೆ ಬರದಿಂದ ತತ್ತರಿಸಿ ಪರಿಹಾರದ ನಿರೀಕ್ಷೆ ಯಲ್ಲಿರುವಾಗ ರಾಜ್ಯದ ಜನತೆಯ ಸಂಕಟಕ್ಕೆ ಯಾವುದೇ ರೀತಿಯ ಪರಿಹಾರ ವನ್ನು ನೀಡದೆ ವಂಚಿಸಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್ ಹಾಗೂ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.