ಮಣಿಪಾಲದಲ್ಲಿ ನೇಪಾಳ ಮೂಲದ ಬಾಲಕಾರ್ಮಿಕನ ರಕ್ಷಣೆ
ಉಡುಪಿ ಫೆ.1: ಮಣಿಪಾಲದ ಹೊಟೇಲೊಂದರಲ್ಲಿ ಕ್ಲೀನರ್ ಕೆಲಸ ನಿರ್ವ ಹಿಸುತ್ತಿದ್ದ ನೇಪಾಳ ಮೂಲದ ಬಾಲಕನನ್ನು ಉಡುಪಿ ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಮತ್ತು ಮಣಿಪಾಲ ಪೊಲೀಸ್ ತಂಡ ಇಂದು ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.
ಈ ಕುರಿತು ಮಕ್ಕಳ ಸಹಾಯವಾಣಿಗೆ ಸಾರ್ವಜನಿಕರು ನೀಡಿದ ದೂರಿನಂತೆ ಈ ದಾಳಿ ನಡೆಸಲಾಗಿದೆ. ಬಾಲಕನನ್ನು ವಿಚಾರಿಸಿದಾಗ ಆತನು ನೇಪಾಳ ಮೂಲದವನಾಗಿದ್ದು, ಆತನ ತಂದೆ, ತಾಯಿ ಮತ್ತು ಸಂಬಂಧಿಕರ ಬಗ್ಗೆ ಸರಿ ಯಾದ ಮಾಹಿತಿ ಗೊತ್ತಿಲ್ಲ ಎಂದು ಬಾಲಕ ತಿಳಿಸಿದ್ದಾನೆ. ಕೆಲಸ ಕೇಳಿಕೊಂಡು ಬಂದ ಆತನನ್ನು ಯಾವುದೇ ಪೂರ್ವಪರ ಮತ್ತು ದಾಖಲೆಗಳನ್ನು ತೆಗೆದುಕೊಳ್ಳದೆ ಕ್ಲೀನರ್ ಆಗಿ ಕೆಲಸಕ್ಕೆ ನಿಯೋಜಿಸಿಕೊಂಡಿದ್ದೇವೆ ಎಂದು ಹೊಟೇಲ್ ಮಾಲಕರು ತಿಳಿಸಿದ್ದಾರೆ.
ರಕ್ಷಿಸಲಾದ ಬಾಲಕನನ್ನು ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಲಾಗಿದ್ದು, ಸಮಿತಿಯ ವೌಖಿಕ ಆದೇಶದಂತೆ ಸಿ.ಎಸ್.ಐ ಬಾಯ್ಸಾ ಹೋಂನಲ್ಲಿ ಆತನಿಗೆ ಪುನರ್ವಸತಿ ಕಲ್ಪಿಸಲಾಯಿತು.
ಈ ಕಾರ್ಯಾಚರಣೆಯಲ್ಲಿ ಉಡುಪಿ ಒಂದನೆ ವೃತ್ತ ಕಾರ್ಮಿಕ ನಿರೀಕ್ಷಕ ಜೀವನ್ ಕುಮಾರ್, ಉಡುಪಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ಪೂರ್ಣಿಮಾ ಬಾನು, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಆಪ್ತ ಸಮಾಲೋಚಕಿ ಅಂಬಿಕಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಔಟ್‌ರೀಚ್ ವರ್ಕರ್ ಸುನಂದ, ಮಣಿಪಾಲ ಠಾಣಾ ಸಿಬ್ಬಂದಿ ಬಸಪ್ಪ, ಉಡುಪಿ ಮಕ್ಕಳ ಸಹಾಯವಾಣಿಯ ಸದಸ್ಯ ಪ್ರಮೋದ್ ಭಾಗವಹಿಸಿದ್ದರು.