×
Ad

ಜಿಲ್ಲಾಸ್ಪತ್ರೆ, ಕೆಎಂಸಿಯಲ್ಲಿ ವಿಶೇಷ ವಾರ್ಡ್‌ಗಳ ವ್ಯವಸ್ಥೆ: ಡಾ.ಸೂಡಾ

Update: 2020-02-01 20:42 IST

 ಉಡುಪಿ ಫೆ.1: ಉಡುಪಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಲು ಎಲ್ಲ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮ ಗಳನ್ನು ಕೈಗೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾಸ್ಪತ್ರೆ ಹಾಗೂ ಮಣಿ ಪಾಲ ಕೆಎಂಸಿಯಲ್ಲಿ ವಿಶೇಷ ವಾರ್ಡ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ.

ಇಲಾಖಾ ಕಚೇರಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಂಕಿತ ಕೊರೊನಾ ವೈರಸ್ ಪೀಡಿತ ರೋಗಿಗಳನ್ನು ದಾಖಲು ಮಾಡಲು ಜಿಲ್ಲಾಸ್ಪತ್ರೆಯಲ್ಲಿ 5 ಹಾಸಿಗೆಗಳುಳ್ಳ ಪ್ರತ್ಯೇಕ ವಾರ್ಡ್, ವೆಂಟಿ ಲೇಟರ್ ಸಹಿತ 2 ಐಸಿಯುಗಳ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಮಣಿ ಪಾಲ ಕೆಎಂಸಿಯಲ್ಲಿ ಕೂಡ 9 ಹಾಸಿಗೆಗಳುಳ್ಳ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಕಲ್ಪಿಸ ಲಾಗಿದೆ ಎಂದರು.

ಜಿಲ್ಲಾ ಸರ್ವೇಕ್ಷಣಾ ಘಟಕದ ಪ್ರಯೋಗ ಶಾಲೆಯಲ್ಲಿ ಶಂಕಿತ ರೋಗಿಗಳ ಥ್ರೋಟ್ ಸ್ವಾಬ್‌ಗಳ ಮಾದರಿ ಸಂಗ್ರಹಣೆ, ಪ್ಯಾಕಿಂಗ್ ಮತ್ತು ಸಾಗಾಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆ, ತಾಲೂಕು, ಪ್ರಾಥಮಿಕ ಆರೋಗ್ಯ ಕೆಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರ ಮಟ್ಟದಲ್ಲಿ ತುರ್ತು ಕಾರ್ಯಪಡೆ ರಚಿಸ ಲಾಗಿದ್ದು, ಸದಾ ಸನ್ನದ್ಧವಾಗಿರುವಂತೆ ಸೂಚನೆ ನೀಡಲಾಗಿದೆ. ಇಲ್ಲಿಂದ ಪ್ರತಿ ದಿನದ ಚಟುವಟಿಕೆಗಳ ವರದಿ ಪಡೆಯಲಾಗುತ್ತಿದೆ ಎಂದು ಅವರು ಹೇಳಿದರು.

ಕೊರೊನಾ ವೈರಸ್ ನಿಯಂತ್ರಣ ಕುರಿತಂತೆ ಆರೋಗ್ಯ ಇಲಾಖೆಯ ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಿಗೆ, ಎಲ್ಲಾ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳ ಫಿಜಿಷಿಯನ್, ಜಿಲ್ಲಾಸ್ಪತ್ರೆಯ ತಜ್ಞ ವೈದ್ಯರು ಗಳಿಗೆ ಮಾಹಿತಿ ಕಾರ್ಯಾಗಾರ ನಡೆಸಲಾಗಿದೆ. ತಾಲೂಕು ಕೇಂದ್ರಗಳಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಅಧೀನ ವೈದ್ಯಾಧಿಕಾರಿಗಳ ಸಭೆ ನಡೆಸಿ, ಅಗತ್ಯ ಸೂಚನೆ ನೀಡಲಾಗಿದೆ ಎಂದರು.

ಕೊರೊನಾ ರೋಗ ಲಕ್ಷಣಗಳ ಕುರಿತು ಜಿಲ್ಲೆಯಲ್ಲಿ ವ್ಯಾಪಕವಾಗಿ ಆರೋಗ್ಯ ಶಿಕ್ಷಣ ಏರ್ಪಡಿಸಲು ಕ್ರಮ ಕೈಗೊಂಡಿದ್ದು, ಉಡುಪಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಲ್ಪೆ, ಕೊಲ್ಲೂರು ಮುಂತಾದ ಪ್ರಮುಖ ಸ್ಥಳಗಳಲ್ಲಿ ಹೋರ್ಡಿಂಗ್ ಅಳವಡಿಕೆಗೆ ಮತ್ತು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆಮನೆಗೆ ಕರ ಪತ್ರಗಳನ್ನು ಹಂಚಲು ಕ್ರಮ ವಹಿಸಲಾಗಿದೆ. ಎನ್- 95 ಮಾಸ್ಕ್ ಸೇರಿದಂತೆ ಎಲ್ಲಾ ವೈಯಕ್ತಿಕ ರಕ್ಷಣಾ ಸಾಮಗ್ರಿಗಳ ದಾಸ್ತಾನು ಇರಿಸಲಾಗಿದೆ ಎಂದು ಅವರು ತಿಳಿಸಿದರು.

ಹೊರರಾಜ್ಯ ಮತ್ತು ಹೊರದೇಶದಿಂದ ಬರುವವರ ಮೇಲೆ ನಿಗಾ ವಹಿಸಲು ಮತ್ತು ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ನಿಗಾ ವಹಿಸುವಂತೆ ಇಲಾಖೆಯ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಹೊರದೇಶದಿಂದ ಬರುವ ವಿದ್ಯಾರ್ಥಿಗಳ ಬಗ್ಗೆ ಮಾಹೆ ವಿವಿಯೊಂದಿಗೆ ನಿರಂತರ ಸಂಪರ್ಕ ಇರಿಸಿಕೊ್ಳಲಾಗಿದೆ ಎಂದು ಅವರು ಹೇಳಿದರು.

ಸಾರ್ವಜನಿಕರು ಅನವಶ್ಯಕ ವದಂತಿಗಳಿಗೆ ಯಾವುದೇ ಭಯಪಡಬೇಕಾ ಗಿಲ್ಲ. ಯಾವುದೇ ಸಮಸ್ಯೆಗಳಿದ್ದಲ್ಲಿ ಉಚಿತ ಹೆಲ್ಪ್‌ಲೈನ್ ಸಂಖ್ಯೆ 104 ಅಥವಾ 080-2228541/22374658 ಅಥವಾ ಉಡುಪಿ ಜಿಲ್ಲಾ ಸರ್ವೆಕ್ಷಣಾ ಘಟಕ ದೂ.ಸಂ.: 0820-2525561ನ್ನು ಸಂರ್ಕಿಸಬಹುದು ಎಂದು ಡಾ.ಸುಧೀರ್ ಚಂದ್ರ ಸೂಡಾ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಎಂ.ಜಿ.ರಾಮ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್, ಹಿರಿಯ ಆರೋಗ್ಯ ಸಹಾಯಕ ಸತೀಶ್ ರಾವ್ ಉಪಸ್ಥಿತರಿದ್ದರು.

ಶಂಕಿತ ಮಂಗನ ಕಾಯಿಲೆ ವರದಿಯಾಗಿಲ್ಲ

ಕಳೆದ ಒಂದು ತಿಂಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಆರು ಮಂಗಗಳ ಕಳೆಬರಹ ಪತ್ತೆಯಾಗಿದ್ದು, ಮಂಗನ ಕಾಯಿಲೆಗೆ ಸಂಬಂಧಿಸಿ ಈ ಮಂಗಗಳ ಅಂಗಾಂಗದ ಸ್ಯಾಂಪಲ್‌ನ್ನು ಪರೀಕ್ಷೆಗಾಗಿ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಆ ಕುರಿತು ನೆಗೆಟಿವ್ ವರದಿ ಬಂದಿದೆ. ಈವರೆಗೆ ಮಂಗನ ಕಾಯಿಲೆಯ ಶಂಕಿತ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ ಎಂದು ಡಾ.ಪ್ರಶಾಂತ್ ಭಟ್ ತಿಳಿಸಿದರು.

ಜನವರಿ ತಿಂಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 24 ಎಚ್1ಎನ್1 ಪ್ರಕರಣಗಳು ವರದಿಯಾಗಿದೆ. ಇದರಲ್ಲಿ ಬಹುತೇಕ ಮಣಿಪಾಲದ ವಸತಿಗೃಹ ಪರಿಸರದಲ್ಲಿ ಕಂಡುಬಂದಿದೆ. ಇಂದು ಒಂದೇ ದಿನ ಮೂರು ಎಚ್1ಎನ್1 ಪ್ರಕರಣ ವರದಿಯಾಗಿದೆ ಎಂದು ಡಿಎಚ್‌ಓ ಡಾ.ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News