ಸಹಕಾರಿ ಸಂಸ್ಥೆಗಳ ಬೈಲಾ ತಿದ್ದುಪಡಿಗೊಳಿಸಿ-ಶ್ರೀಧರ್ ಶೆಟ್ಟಿ ಆಗ್ರಹ
ಪುತ್ತೂರು: ಈಗಿನ ಸಹಕಾರಿ ಸಂಸ್ಥೆಗಳ ಬೈಲಾಗಳು ರೈತರಿಗೆ ವಿರೋಧಿಯಾಗಿದ್ದು, ಅದನ್ನು ರೈತರಿಗೆ ಸಂಬಂಧಪಟ್ಟಂತೆ ತಿದ್ದುಪಡಿ ಮಾಡಬೇಕು. ಜಂಟಿ ಖಾತೆಯಲ್ಲಿರುವ ಎಲ್ಲಾ ರೈತರ ಸಾಲ ಸೌಲಭ್ಯಗಳನ್ನು ನೀಡಬೇಕು. 2016-17 ನೇ ಸಾಲಿನಲ್ಲಿ ಬೆಳೆ ವಿಮೆ ಕಟ್ಟಿದವರಿಗೆ ಕೂಡಲೇ ಮಂಜೂರು ಮಾಡಬೇಕು ಎಂದು ರೈತ ಸಂಘ ಜಿಲ್ಲಾಧ್ಯಕ್ಷ ಬಿ. ಶ್ರೀಧರ ಶೆಟ್ಟಿ ಹೇಳಿದರು.
ಅವರು ಶನಿವಾರ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ದ. ಕ. ಜಿಲ್ಲಾ ಸಮಿತಿಯ ವತಿಯಿಂದ ಪುತ್ತೂರು ಮಿನಿ ವಿಧಾನಸೌಧದ ಮುಂಬಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಈಗಿನ ಸಹಕಾರಿ ಸಂಸ್ಥೆಗಳ ಬೈಲಾಗಳು ರೈತರಿಗೆ ವಿರೋಧಿಯಾಗಿದ್ದು, ಅದನ್ನು ರೈತಸ್ನೇಹಿ ಮಾಡಬೇಕು. 2016-17 ನೇ ಸಾಲಿನಲ್ಲಿ ಬೆಳೆ ವಿಮೆ ಕಟ್ಟಿದವರಿಗೆ ಕೂಡಲೇ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಸುಸ್ತಿದಾರರಾಗಿರುವ ಜಿಲ್ಲೆಯ ಸುಮಾರು 150 ಮಂದಿ ರೈತರ 2009 ಕ್ಕಿಂತ ಹಿಂದಿನ ಬೆಳೆಸಾಲ, ದೀರ್ಘಾವಧಿ ಸೇರಿದಂತೆ ಎಲ್ಲಾ ಸಾಲಗಳನ್ನು ಕೂಡಲೇ ಮನ್ನಾ ಮಾಡಲು ಸರಕಾರ ಕ್ರಮ ಕೈಗೊಳ್ಳಬೇಕು. 2018 ರ ಅಡಿಕೆ ಕೊಳೆರೋಗ ಪರಿಹಾರವನ್ನು ಶೇ.50 ರಷ್ಟು ಮಾತ್ರ ಕೊಟ್ಟಿದ್ದು, ಉಳಿಕೆ 50 ಶೇ. ಪರಿಹಾರವನ್ನು ಕೂಡಲೇ ನೀಡಬೇಕು. 2019 ರಲ್ಲೂ ಅಡಿಕೆ ಕೊಳೆರೋಗ ಪರಿಹಾರಕ್ಕೆ ಸಂಬಂಧಪಟ್ಟಂತೆ ಅರ್ಜಿ ಸ್ವೀಕರಿಸಿದ್ದು, ಕೂಡಲೇ ಹಣ ಬಿಡುಗಡೆ ಮಾಡಬೇಕು. ಕಾಡುಪ್ರಾಣಿಗಳ ಹಾವಳಿಯಿಂದ ಕೃಷಿಕ ಕಂಗೆಟ್ಟಿದ್ದು, ಕಾಡುಪ್ರಾಣಿಗಳು ಕೃಷಿ ಭೂಮಿಗೆ ಬರದಂತೆ ಮಾಡಲು ಅರಣ್ಯ ಇಲಾಖೆ ಅವುಗಳಿಗೆ ಪ್ರತ್ಯೇಕ ಸ್ಥಳವನ್ನು ಮೀಸಲಿಡಬೇಕು. ಬಂದೂಕು ಪರವಾನಿಗೆ ನೀಡುವ ಜವಾಬ್ದಾರಿಯನ್ನು ತಾಲೂಕಿನ ತಹಶೀಲ್ದಾರ್ ಅವರಿಗೇ ನೀಡಬೇಕು ಮತ್ತು ಪರವಾನಿಗೆ ಪಡೆಯಲು ಡಿಪಾಸಿಟ್ ಇಡುವ ಕ್ರಮ ರದ್ದುಗೊಳಿಸ ಬೇಕು. ಖಾಸಗಿಯವರಿಗೆ ನೀಡಿರುವ ಗೋಮಾಳ ಭೂಮಿಯ ಪಹಣಿಯನ್ನು ರದ್ದುಪಡಿಸಿ ಸರ್ಕಾರ ಗೋವುಗಳಿಗೆ ಮೇಯಲು ಆ ಪ್ರದೇಶವನ್ನು ಕಾಯ್ದಿರಿಸಬೇಕು ಎಂದು ಅವರು ಒತ್ತಾಯಿಸಿದರು.
ರೈತ ಸಂಘಟನೆಯ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಪಂಚಮಲೋಡಿ ಮಾತನಾಡಿ ಬಂದೂಕು ಪರವಾಣಗಿ ನೀಡುವ ಜವಾಬ್ದಾರಿಯನ್ನು ತಾಲೂಕಿನ ತಹಸೀಲ್ದಾರ್ ಅವರಿಗೇ ನೀಡಬೇಕು ಮತ್ತು ಪರವಾನಿಗೆ ಪಡೆಯಲು ಡಿಪಾಸಿಟ್ ಇಡುವ ಕ್ರಮ ರದ್ದುಗೊಳಿಸ ಬೇಕು. ಖಾಸಗಿಯವರಿಗೆ ನೀಡಿರುವ ಗೋಮಾಳ ಭೂಮಿಯ ಪಹಣಿಯನ್ನು ರದ್ದುಪಡಿಸಿ ಸರ್ಕಾರ ಗೋವುಗಳಿಗೆ ಮೇಯಲು ಆ ಪ್ರದೇಶವನ್ನು ಕಾಯ್ದಿರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಗೌಡ, ಕಡಬ ತಾಲೂಕು ಅಧ್ಯಕ್ಷ ವಿಕ್ಟರ್ ಮಾರ್ಟಿಸ್, ಕುಂಬ್ರ ವಲಯ ಅಧ್ಯಕ್ಷ ಶೇಖರ್ ರೈ, ಸಂಘದ ಪ್ರಮುಖರಾದ ಮುರುವ ಮಹಾಬಲ ಭಟ್, ರಾಮಕೃಷ್ಣ ಅಡ್ಯಂತಾಯ, ವಿನೋದ ಶೆಟ್ಟಿ, ಈಶ್ವರ ಗೌಡ ಕುಂತೂರು, ಇಸುಬು ಪುಣಚ, ವೆಂಕಟರಮಣ ಭಟ್, ಮಾಣಿಕ್ಯರಾಜ್ ಜೈನ್, ಇದಿನಬ್ಬ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನೆಯ ಬಳಿಕ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ದ. ಕ. ಜಿಲ್ಲಾ ಸಮಿತಿಯ ವತಿ ಯಿಂದ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.