ಬಜೆಟ್ ಮಂಡನೆ ವೇಳೆ ಸುಸ್ತಾದ ನಿರ್ಮಲಾ ಸೀತಾರಾಮನ್ ರಿಗೆ ಕ್ಯಾಂಡಿ ನೀಡಿದ್ದೇಕೆ?: ಇಲ್ಲಿದೆ ಉತ್ತರ

Update: 2020-02-01 15:31 GMT

ಹೊಸದಿಲ್ಲಿ, ಫೆ.1: ಸಂಸತ್ತಿನ ಇದುವರೆಗಿನ ಬಜೆಟ್ ಭಾಷಣಕ್ಕೆ ಹೋಲಿಸಿದರೆ ಶನಿವಾರ ಅತಿ ದೀರ್ಘ ಬಜೆಟ್ ಭಾಷಣ ಮಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊನೆಯ ಹಂತದಲ್ಲಿ ತನ್ನ ಭಾಷಣ ಮೊಟಕುಗೊಳಿಸಿದ್ದಾರೆ. ಅಸ್ವಸ್ಥರಾದ ಕಾರಣಕ್ಕೆ ಹಾಗೂ ರಕ್ತದೊತ್ತಡ ಸರಿದೂಗಿಸಲು ಅವರಿಗೆ ಸಕ್ಕರೆ ನೀಡಬೇಕಾಗಿರುವುದರಿಂದ ಅವರು ಭಾಷಣ ಪೂರ್ಣಗೊಳಿಸದೇ ವಿರಮಿಸಿದರು.

ಸುಮಾರು ಎರಡೂವರೆ ಗಂಟೆಗಳ ಕಾಲ ನಿಂತುಕೊಂಡು ಬಜೆಟ್ ಭಾಷಣ ಮಾಡಿದ ಕಾರಣ 60ರ ಹರೆಯದ ನಿರ್ಮಲಾ ಸೀತಾರಾಮನ್ ಸುಸ್ತಾದರು ಹಾಗೂ ಬೆವರಿದರು. ಅನಂತರ ರಕ್ತದೊತ್ತಡ ಸರಿದೂಗಿಸಲು ಸ್ವಲ್ಪ ಸಕ್ಕರೆ ಸೇವಿಸಿದರು ಹಾಗೂ ಹಣೆಯ ಬೆವರು ಒರೆಸಿಕೊಂಡರು. ಇನ್ನು ಓದಲು ಕೇವಲ ಎರಡು ಪುಟ ಮಾತ್ರ ಉಳಿದಿದೆ ಎಂದು ಅವರು ಲೋಕಸಭೆಗೆ ತಿಳಿಸಿದರು.

ಅವರ ರಕ್ತದೊತ್ತಡ ಇಳಿಕೆಯಾಗಿತ್ತು. ಕೂಡಲೇ ಕುಳಿತುಕೊಳ್ಳುವಂತೆ ಅವರಿಗೆ ಸಲಹೆ ನೀಡಲಾಯಿತು. ಸಹೋದ್ಯೋಗಿಗಳು ಅವರಿಗೆ ಕ್ಯಾಂಡಿ ನೀಡಿದರು. ಸಕ್ಕರೆ ಮಟ್ಟ ಕಡಿಮೆಯಾದರೆ ಸಕ್ಕರೆ ಕ್ಯಾಂಡಿ, ಗ್ಲೂಕೋಸ್ ಟ್ಯಾಬ್ಲೆಟ್ ಮತ್ತು ಸಿರಪ್ ನೀಡಲಾಗುತ್ತದೆ.

ಕೇಂದ್ರ ಸಚಿವ ಹರ್ಸಿಮ್ರಾತ್ ಕೌರ್ ಸೀತಾರಾಮನ್ ರಿಗೆ ಒಂದು ಗ್ಲಾಸ್ ನೀರು ನೀಡಿದರು. ನಿರ್ಮಲಾ ಸೀತಾರಾಮನ್ ಮತ್ತೆ ಓದಲು ಹಿಂಜರಿದಾಗ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಹುರಿದುಂಬಿಸಿದರು. ಅನಂತರ ನಿರ್ಮಲಾ ಸೀತಾರಾಮನ್, ತಾನು ಸುಧಾರಿಸಿಕೊಂಡಿದ್ದೇನೆ. ಬಜೆಟ್ ಮಂಡಿಸಲು ರಾಜ್ಯಸಭೆಗೆ ತೆರಳಲಿದ್ದೇನೆ ಎಂದು ಹೇಳಿದರು.

ಇಂದು ನಿರ್ಮಲಾ ಸೀತಾರಾಮನ್ ಅತೀ ದೀರ್ಘ ಬಜೆಟ್ ಭಾಷಣ ಮಾಡುವ ಮೂಲಕ ತನ್ನದೇ ದಾಖಲೆ ಮುರಿದಿದ್ದಾರೆ. ಕಳೆದ ವರ್ಷ ಅವರು 2 ಗಂಟೆ 17 ನಿಮಿಷಗಳ ದೀರ್ಘ ಕಾಲ ಬಜೆಟ್ ಭಾಷಣ ಮಾಡಿದ್ದರು. ಈ ವರ್ಷ ಅವರು 2 ಗಂಟೆ 41 ನಿಮಿಷಗಳ ಕಾಲ ಭಾಷಣ ಮಾಡಿದರು. ಈ ದೀರ್ಘ ಭಾಷಣದಲ್ಲಿ ಕಾಶ್ಮೀರಿ ಪದ್ಯ ಹಾಗೂ ತಮಿಳು ಕವನ ಹೇಳಿದರು. ನಿರ್ಮಲಾ ಸೀತಾರಾಮನ್‌ಗಿಂತ ಹಿಂದೆ ಅತಿ ದೀರ್ಘ ಬಜೆಟ್ ಭಾಷಣ ಮಾಡಿದವರು ಮಾಜಿ ವಿತ್ತ ಸಚಿವ ಜಸ್ವಂತ್ ಸಿಂಗ್. ಕಳೆದ ವರ್ಷ ನಿರ್ಮಲಾ ಸೀತಾರಾಮನ್ ಅವರು 2 ನಿಮಿಷಗಳ ಕಾಲ ಹೆಚ್ಚು ದೀರ್ಘ ಭಾಷಣ ಮಾಡುವ ಮೂಲಕ ಸಿಂಗ್ ಅವರ ದಾಖಲೆ ಮುರಿದಿದ್ದರು.

2014ರಲ್ಲಿ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ 2 ಗಂಟೆ 10 ನಿಮಿಷಗಳ ದೀರ್ಘ ಬಜೆಟ್ ಭಾಷಣ ಮಾಡಿದ್ದರು. 1991ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ದೀರ್ಘ ಭಾಷಣ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News