ಕೊರೋನಾ ವೈರಸ್: ಚೀನಾದಿಂದ 324 ಭಾರತೀಯರನ್ನು ತೆರವುಗೊಳಿಸಿದ ಏರ್ ಇಂಡಿಯಾ ವಿಮಾನ

Update: 2020-02-01 15:42 GMT

ಹೊಸದಿಲ್ಲಿ, ಫೆ. 1: ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನ ಕೇಂದ್ರವಾಗಿರುವ ಚೀನಾದ ವುಹಾನ್ ನಗರದಿಂದ 324 ಭಾರತೀಯರನ್ನು ತೆರವುಗೊಳಿಸಲಾಗಿದೆ. ಅವರನ್ನು ಒಳಗೊಂಡ ಏರ್ ಇಂಡಿಯಾದ ಜಂಬೋ ಬಿ747 ವಿಮಾನ ಶನಿವಾರ ಬೆಳಗ್ಗೆ ಇಲ್ಲಿಗೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

211 ವಿದ್ಯಾರ್ಥಿಗಳು, 110 ವೃತ್ತಿಪರ ಕೆಲಸಗಾರರು ಹಾಗೂ ಮೂವರು ಅಪ್ರಾಪ್ತರು ದಿಲ್ಲಿಗೆ ಸುಮಾರು ಬೆಳಗ್ಗೆ 7.30ಕ್ಕೆ ತಲುಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಏರ್ ಇಂಡಿಯಾದ ಇನ್ನೊಂದು ವಿಮಾನ ಇಲ್ಲಿಂದ ಅಪರಾಹ್ನ 1.37ಕ್ಕೆ ಚೀನಾದ ವುಹಾಂಗ್ ನಗರಕ್ಕೆ ತೆರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ವಿಮಾನದಲ್ಲಿ ಇದ್ದ ರಾಮಮನೋಹರ ಲೋಹಿಯಾ ಆಸ್ಪತ್ರೆಯ ಐವರು ವೈದ್ಯರು ಎರಡನೇ ವಿಮಾನದಲ್ಲಿ ಕೂಡ ಇದ್ದರು ಎಂದು ಏರ್ ಇಂಡಿಯಾದ ವಕ್ತಾರರು ತಿಳಿಸಿದ್ದಾರೆ.

ಕೊರೋನಾ ವೈರಸ್ ಸೋಂಕು ಹರಡಿದ ಹಿನ್ನೆಲೆಯಲ್ಲಿ ಚೀನಾದ ಹುಬೈ ಪ್ರಾಂತ್ಯದಿಂದ ಸ್ಥಳಾಂತರಿಸಲಾದ ಸುಮಾರು 300 ಭಾರತೀಯ ವಿದ್ಯಾರ್ಥಿಗಳನ್ನು ಇರಿಸಲು ದಿಲ್ಲಿ ಸಮೀಪದ ಮಾನೇಸರ್‌ನಲ್ಲಿ ಭಾರತೀಯ ಸೇನೆ ದಿಗ್ಭಂದನ ವ್ಯವಸ್ಥೆಯನ್ನು ಆರಂಭಿಸಿದೆ. ಗಡಿ ರಕ್ಷಣಾ ಪಡೆ ಐಟಿಬಿಪಿ ದಿಗ್ಭಂದನಕ್ಕಾಗಿ ನೈಋತ್ಯ ದಿಲ್ಲಿಯ ಚಾವ್ಲಾ ಪ್ರದೇಶದಲ್ಲಿ ಪ್ರತ್ಯೇಕವಾಗಿ 600 ಹಾಸಿಗೆಗಳ ಸೌಲಭ್ಯ ರೂಪಿಸಿದೆ.

ಅಲ್ಲದೆ, ಕೊರೊನಾ ವೈರಸ್‌ನ ಸೋಂಕಿಗೆ ಒಳಗಾದವರಿಗೆ ಮೂಲಭೂತ ವೈದ್ಯಕೀಯ ಚಿಕಿತ್ಸೆ ನೀಡಲಿದೆ. ಅರ್ಹ ವೈದ್ಯರ ತಂಡ ಹಾಗೂ ಸಿಬ್ಬಂದಿ ಎರಡು ವಾರಗಳ ಕಾಲ ಸೋಂಕಿನ ಯಾವುದೇ ಚಿಹ್ನೆಯ ಬಗ್ಗೆ ನಿಗಾ ಇರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೀನದಲ್ಲಿದ್ದ 250ಕ್ಕೂ ಅಧಿಕ ಭಾರತೀಯರನ್ನು ತೆರವುಗೊಳಿಸಲು ಮೊದಲ ವಿಮಾನ ದಿಲ್ಲಿ ವಿಮಾನ ನಿಲ್ದಾಣದಿಂದ ಶುಕ್ರವಾರ ಅಪರಾಹ್ನ 1.17ಕ್ಕೆ ತೆರಳಿತ್ತು. ಕೊನೊರಾ ವೈರಸ್‌ಗೆ ಯಾವುದೇ ಭಾರತೀಯ ಸಾವನ್ನಪ್ಪಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News