ಮಂಡಿ ನೋವಿನ ಎಣ್ಣೆ ಹೆಸರಿನಲ್ಲಿ ವಂಚನೆ: ದೂರು
ಕುಂದಾಪುರ, ಫೆ.1: ಮಂಡಿ ನೋವಿನ ಎಣ್ಣೆಯನ್ನು ಕೊಡುವುದಾಗಿ ನಂಬಿಸಿ ಮೋಸ ಮಾಡಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ ಈಸ್ಟ್ ಬ್ಲಾಕ್ ರಸ್ತೆಯ ನಿವಾಸಿ ದೀಪಾ ಎಂ.ಶೆಣೈ(62) ಎಂಬವರ ಪತಿ ಮೋಹನ್ ಯು.ಶೆಣೈ ಎಂಬವರಿಗೆ ವಿಪರೀತ ಮಂಡಿ ನೋವು ಇದ್ದು, ಜ.2ರಂದು ಸೀತಾರಾಮ ಎಂಬಾತ ದೀಪಾ ಶೆಣೈರ ಮನೆಗೆ ಬಂದು ಮಂಡಿ ನೋವಿಗೆ ಔಷಧಿ ಕೊಡುವುದಾಗಿ ತಿಳಿಸಿ, ಬಳಿಕ ದಂಪತಿಯನ್ನು ಮನೆ ಸಮೀಪದಲ್ಲಿರುವ ಅಥರ್ವ ಆಯುರ್ವೇದ ಕ್ಲಿನಿಕ್ ಗೆ ಕರೆದುಕೊಂಡು ಹೋಗಿದ್ದನು.
ಅಲ್ಲಿ ವಿಕಾಸ್ ಮತ್ತು ಸೀತಾರಾಮ ಸೇರಿ ಮಂಡಿ ನೋವಿನ ಎಣ್ಣೆಯನ್ನು ಕೊಟ್ಟು ಮಂಡಿ ನೋವನ್ನು ಸಂಪೂರ್ಣ ಗುಣ ಮಾಡುವುದಾಗಿ ನಂಬಿಸಿ ದೀಪಾ ಶೆಣೈ ಅವರಿಂದ 9,000 ರೂ. ಹಣ ಮತ್ತು 4,54,000ರೂ. ಮೊತ್ತದ ಚೆಕನ್ನು ಪಡೆದುಕೊಂಡಿದ್ದರು. ಚೆಕ್ ಹಣವು ಅನಿಲ್ ಪವಾರ್ ಎಂಬವರ ಹೆಸರಿನ ಖಾತೆಗೆ ಜಮಾ ಆಗಿತ್ತು. ಬಳಿಕ ಆರೋಪಿಗಳು ಅಥರ್ವ ಆಯುರ್ವೇದ ಕ್ಲಿನಿಕ್ ಬಂದ್ ಮಾಡಿ ದೀಪಾ ಶೆಣೈ ದಂಪತಿಗೆ ಮೋಸ ಮಾಡಿರುವುದಾಗಿ ದೂರಲಾಗಿದೆ.