×
Ad

ಮೈಕ್ರೋ ಫೈನಾನ್ಸ್ ಕಂಪೆನಿಗಳ ದಬ್ಬಾಳಿಕೆಯ ವಿರುದ್ಧ ಹೋರಾಟ: ಋಣಮುಕ್ತಕ್ಕಾಗಿ ಹೋರಾಟ ಸಮಿತಿ ಎಚ್ಚರಿಕೆ

Update: 2020-02-01 22:32 IST

ಮಂಗಳೂರು, ಫೆ.1: ರಾಜ್ಯದ ಹಲವು ಮೈಕ್ರೋ ಫೈನಾನ್ಸ್ ಕಂಪೆನಿಗಳು ಅಮಾಯಕ ಮಹಿಳೆಯರ ವಿರುದ್ಧ ದಬ್ಬಾಳಿಕೆ ನಡೆಸುತ್ತಲಿದೆ. ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸರಕಾರಿ ಅಧಿಕಾರಿಗಳು, ಜನಪ್ರನಿಧಿಗಳು ಸಾಲ ಪಡೆದ ಮಹಿಳೆಯರ ಪರ ನಿಲ್ಲದೆ ಕಂಪೆನಿಯೊಂದಿಗೆ ಕೈ ಜೋಡಿಸಿದೆ. ಇದರ ವಿರುದ್ಧ ಸೆಟೆದು ನಿಲ್ಲುವುದಕ್ಕಾಗಿ ರಾಜ್ಯ ಋಣಮುಕ್ತಕ್ಕಾಗಿ ಹೋರಾಟ ಸಮಿತಿ ರಚಿಸಲ್ಪಟ್ಟಿದೆ. ಸಾಲದ ವಿಚಾರದಲ್ಲಿ ಸರಕಾರ ಆದೇಶ ಹೊರಡಿಸುವವರೆಗೆ ಮೈಕ್ರೋ ಫೈನಾನ್ಸ್ ಕಂಪೆನಿಗಳ ಸಿಬ್ಬಂದಿ ವರ್ಗವು ದಬ್ಬಾಳಿಕೆ ನಡೆಸಬಾರದು. ಒಂದು ವೇಳೆ ದಬ್ಬಾಳಿಕೆ ನಡೆಸಿದರೆ ತೀವ್ರತರದ ಹೋರಾಟ ಮಾಡಲಾಗುವುದು ಎಂದು ಋಣಮುಕ್ತಕ್ಕಾಗಿ ಹೋರಾಟ ಸಮಿತಿಯ ಸಂಚಾಲಕ ಸಿದ್ದೀಕ್ ತಲಪಾಡಿ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಗ್ರಾಮೀಣ ಪ್ರದೇಶಕ್ಕೆ ತೆರಳುವ ಕಂಪೆನಿಗಳ ಸಿಬ್ಬಂದಿಗಳು 5 ಅಥವಾ 10 ಮಹಿಳೆಯರ ಗುಂಪು ರಚಿಸುತ್ತಾರೆ. 10 ಸಾವಿರದಿಂದ 30 ಸಾವಿರದವರೆಗೆ ಶೇ.18ರಿಂದ ಶೇ. 45ರವರೆಗೆ ವಾರ್ಷಿಕ ಬಡ್ಡಿಗೆ ಸಾಲ ನೀಡುತ್ತಾರೆ. 1 ಅಥವಾ ಒಂದುವರೆ ವರ್ಷದೊಳಗೆ ಸಾಲ ಮರು ವಸೂಲಿ ಮಾಡಲು ಷರತ್ತು ವಿಧಿಸುತ್ತಾರೆ. ಅವಧಿಯೊಳಗೆ ಸಾಲ ಮರುಪಾವತಿಸಲಾಗದ ಮಹಿಳೆ ಯರು ಮತ್ತೆ ಮತ್ತೆ ಇದೇ ಫೈನಾನ್ಸ್ ಕಂಪೆನಿಗಳಿಂದ ಸಾಲ ಪಡೆದು ಶೋಷಣೆಗೊಳಗಾಗುತ್ತಾರೆ. ಸಾಲ ವಸೂಲಾತಿಯ ನೆಪದಲ್ಲಿ ಈ ಕಂಪೆನಿ ಗಳ ಸಿಬ್ಬಂದಿ ವರ್ಗವು ಅಕ್ರಮವಾಗಿ ಸಾಲಪಡೆದ ಮಹಿಳೆಯರ ಮನೆಗೆ ನುಗ್ಗಿ ಅವಾಚ್ಯ ಶಬ್ದದಿಂದ ನಿಂದಿಸುತ್ತಾರೆ. ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಾರೆ ಎಂದು ಆರೋಪಿಸಿದರು.

ಗೂಂಡಾಗಳಂತೆ ವರ್ತಿಸುವ ಈ ಕಂಪೆನಿಗಳ ಸಿಬ್ಬಂದಿಗಳು ಸಾಲ ಮರುಪಾವತಿಸದಿದ್ದರೆ ಕದಲುವುದಿಲ್ಲ ಎಂದು ಹೇಳಿ ದಿನವಿಡೀ ಮನೆಯಲ್ಲೇ ಕುಳಿತು ಮಹಿಳೆಯರಿಗೆ ಮುಜುಗರ ಸೃಷ್ಟಿಸುತ್ತಾರೆ. ಈಗಾಗಲೆ ರಾಜ್ಯದಲ್ಲಿ ಈ ಕಂಪೆನಿಗಳ ಸಿಬ್ಬಂದಿಯ ದೌರ್ಜನ್ಯ ತಾಳಲಾರದೆ 27 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಮಿತಿಯು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡಲು ಮನವಿ ಮಾಡಲಾಗುವುದು ಎಂದರು.

ಅಸಹಾಯಕತೆಯ ದುರುಪಯೋಗ ಬೇಡ: ಈ ಮಧ್ಯೆ ಮೈಕ್ರೋ ಫೈನಾನ್ಸ್‌ನವರ ಕಾಟದಿಂದ ತತ್ತರಿಸಿರುವ ಮಹಿಳೆಯರ ಪರ ನಿಲ್ಲದೆ, ನ್ಯಾಯ ದೊರಕಿಸಿಕೊಡುವ ನೆಪದಲ್ಲಿ ಅವರನ್ನು ಮತ್ತೆ ಶೋಷಣೆ ಮಾಡುವ ಪ್ರಯತ್ನ ನಡೆದಿದೆ. ಇದು ಖಂಡನೀಯ. ಯಾರೇ ಆಗಲಿ, ಈ ಮಹಿಳೆಯರ ಅಸಹಯಾಕತೆಯನ್ನು ದುರುಪಯೋಗ ಮಾಡದೆ ನ್ಯಾಯ ದೊರಕಿಸಿಕೊಡಬೇಕು ಎಂದು ಸಮಿತಿಯ ರಾಜ್ಯಾಧ್ಯಕ್ಷ ಸಂತೋಷ್ ನಿನ್ನಿಕಲ್ ತಿಳಿಸಿದರು.

ಜಿಲ್ಲೆಯಲ್ಲೂ ಮೈಕ್ರೋ ಫೈನಾನ್ಸ್ ಕಂಪೆನಿಯವರ ಸಮಿತಿಯೊಂದಿದೆ. ಜಿಲ್ಲಾಧಿಕಾರಿ ಅವದೊಂದಿಗೆ ಮಾತುಕತೆ ನಡೆಸಿ ನೊಂದ ಮಹಿಳೆಯರಿಗೆ ದೂರು ನೀಡಲು ಕಚೇರಿಯೊಂದನ್ನು ತೆರೆಯಲು ಸೂಚಿಸಿದ್ದಾರೆ. ಆದರೆ,ಈವರೆಗೆ ಸಮಿತಿಯು ಜಿಲ್ಲಾಧಿಕಾರಿಯ ಆದೇಶವನ್ನು ಪಾಲಿಸಿಲ್ಲ ಎಂದು ಸಮಿತಿಯ ಕಾರ್ಯದರ್ಶಿ ಶೇಖರ್ ಬೆಳ್ತಂಗಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಉಚ್ಚಿಲ್, ಅನೀಶ್ ಕರಂಬಾರ್, ಶೋಭಾ ಕೊಯಿಲ, ಜಯಂತಿ ಕರ್ಕೇರಾ, ದೇವಕಿ ಭಟ್ಕಳ, ಆಶಾ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News