×
Ad

ಭಕ್ತರಿಂದ ಪಾದಪೂಜೆ ಮಾಡಿಸಿಕೊಳ್ಳುವುದು ಗುರುತತ್ವಕ್ಕೆ ಅಪಚಾರ; ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

Update: 2020-02-01 22:56 IST

ಭಟ್ಕಳ: ‘ಸುಖಸ್ಯ ಮೂಲ ಧರ್ಮ. ಇತ್ತೀಚಿನ ದಿನದಲ್ಲಿ ಪೂಜೆ ಮಾಡುವ ಅರ್ಚಕರು ಭಕ್ತರಿಂದ ಪಾದ ಪೂಜೆ ಮಾಡಿಸಿಕೊಳ್ಳುತ್ತಿದ್ದಾರೆ. ಇದು ಬೇಸರದ ಸಂಗತಿಯಾಗಿದೆ. ಇದರಿಂದ ಗುರುತತ್ವಕ್ಕೆ ಅಪಚಾರವಾಗಲಿದೆ ಎಂದು ಧರ್ಮಸ್ಥಳ ಉಜಿರೆ ಶ್ರೀ ರಾಮ ಕ್ಷೇತ್ರದ ಮಠಾದೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಅವರು ಭಟ್ಕಳದ ಆಸರಕೇರಿಯ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಶ್ರೀ ದೇವರ ಪುನರ್ ಪ್ರತಿಷ್ಟಾ ವರ್ಧಂತಿ ಉತ್ಸವದ 4ನೇ ದಿನವಾದ ಶನಿವಾರದಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ  ಆಶೀರ್ವಚನ ನೀಡಿ ಮಾತನಾಡಿದರು.

ಸಮಾಜದಲ್ಲಿ ಉತ್ತಮ, ಮಧ್ಯಮ ಹಾಗೂ ಅದಮರಲ್ಲಿ ಸಾಕಷ್ಟು ವ್ಯತ್ಯಾಸವಿದ್ದು, ಉತ್ತಮ ಸಂಸ್ಕಾರದಲ್ಲಿ ಬದುಕಬೇಕು. ಮಡಿ ಮೈಲಿಗೆ ಎಂಬ ವಿಚಾರವೂ ಮನದಲ್ಲಿರಬೇಕು ಹೊರತು ಜನರ ಮಧ್ಯೆ ತರಬಾರದು. ಒಂದು ಸಮಾಜದಲ್ಲಿ ಸಹಸ್ರಕ್ಕು ಅಧಿಕ ಜನರು ಸೇರಿ ದೇವಸ್ಥಾನದ ಕಾರ್ಯಕ್ರಮ ನಡೆಸಲಿದ್ದು, ಇದು ಸಮಾಜದ ನಾಯಕರ ಹೋರಾಟವಾಗಲಿ ಅವರ ಪರಿಶ್ರಮದಿಂದಾಗಲಿ ಅಲ್ಲ. ಕ್ಷೇತ್ರಕ್ಕೆ ಬರುವ ಸಹಸ್ರಾರು ಭಕ್ತರಿಂದ ಮಹಿಮೆ ಹೆಚ್ಚಲಿದೆ ಎಲ್ಲವೂ ದೇವರ ಕೃಪೆ. ಕುರುಡ ಆನೆಯನ್ನು ವಿಶ್ಲೇಷಣೆ ಮಾಡಿದಂತೆ ಭಕ್ತರು ದೇವರನ್ನು ವಿಶ್ಲೇಷಿದಂತೆ. ಪಂಚಭೂತದಿಂದಾದ ದೇಹವನ್ನು ಹೊಂದಿದ ನಾವುಗಳು ದೇವರ ಸ್ಮರಣೆಯಿಂದ ಬದುಕಬೇಕು. ಸಣ್ಣ ಪ್ರಾಯದಲ್ಲಿನ ಸಂಸ್ಕಾರ, ಆಚರಣೆಯೂ ಇಳಿ ವಯಸ್ಸಿನ ತನಕ ಮುಂದುವರೆಸಿಕೊಂಡು ಹೋಗಬೇಕು. ಕರ್ಮ ಯಾವತ್ತು ಜಾತಿಯನ್ನು ತೋರಿಸುತ್ತದೆ ಹೊರತು ಬೇರೆ ಯಾವುದ ರಿಂದಲೂ ಸಾಧ್ಯವಿಲ್ಲ. ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಾಜದ ಬಂಧುಗಳು ಪಾಲ್ಗೊಳ್ಳಬೇಕು ಆಗ ಮನಸ್ಸಿಮ ನೆಮ್ಮದಿ ಸಾಧ್ಯ ಎಂದು ಕರೆ ನೀಡಿದರು.

ಇದಕ್ಕು ಪೂರ್ವದಲ್ಲಿ ನಾಮಧಾರಿ ಸಮಾಜದ ಅಧ್ಯಕ್ಷ ಎಮ್.ಆರ್.ನಾಯ್ಕ ಮಾತನಾಡಿದ್ದು ‘ಈ ವರ್ಷ ನನ್ನ ಅಧ್ಯಕ್ಷೀಯ ಅವಧಿ ಮುಗಿಯಲಿದೆ. ಒಂದು ಸಮಯದಲ್ಲಿ ನಾಮಧಾರಿ ಸಮಾಜ ತೀರಾ ಬಡತನದಲ್ಲಿ ಜೀವನ ಸಾಗಿಸುತ್ತಿದ್ದು, ಜಮೀನು ಗದ್ದೆಯಲ್ಲಿ ಕೂಲಿ ಮಾಡಿ ದುಡಿದು ಕಷ್ಟಪಟ್ಟಿದ್ದಾರೆ. ನಮ್ಮ ಹಿರಿಯರ ಸಂಸ್ಕಾರ, ಸಂಸ್ಕೃತಿಯಲ್ಲಿ ಶ್ರೀಮಂತರಿದ್ದು, ನಾವಿಂದು ಅವೆಲ್ಲವನ್ನು ಮರೆತು ದೂರ ಸರಿಯುತ್ತಿದ್ದೆವೆ. ಹಣ, ಶ್ರೀಮಂತಿಕೆ ಇವೆ ಆದರೆ ಈಗ ಸಂಸ್ಕೃತಿ ಸಂಸ್ಕಾರ ಇಲ್ಲವಾಗಿದೆ. ನಾಮಧಾರಿ ಸಮಾಜದಲ್ಲಿ ಎಲ್ಲರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗ ಬೇಕು. ಜ್ಞಾನ, ಧ್ಯಾನ, ಧೈರ್ಯದಿಂದ ಬದುಕು ಸಾಗಿಸಬೇಕು, ಸನ್ಮಾರ್ಗದೆಡೆಗೆ ತೆರಳಲು ಗುರುವಿದ್ದು ಸೂಕ್ತ ಮಾರ್ಗದರ್ಶನವೂ ಸಹ ಇದೆ. ಅದನ್ನು ಗ್ರಹಿಸಿ ಮುನ್ನುಡೆಯಬೇಕು ಎಂದು ಹೇಳಿದರು.

ಇದಕ್ಕೂ ಪೂರ್ವದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಾದ ಪೂಜೆಯನ್ನು ನಾಮಧಾರಿ ಸಮಾಜದ ಉಪಾಧ್ಯಕ್ಷ ಮೋಹನ ನಾಯ್ಕ ಹಾಗೂ ನಾಮಧಾರಿ ಸಮಾಜದ ಪ್ರಮುಖರು ನೆರವೆರಿಸಿದರು. ನಂತರ ಖಾರ್ವಿ ಸಮಾಜದ ಪ್ರಮುಖ ಎನ್.ಡಿ.ಖಾರ್ವಿ ಸ್ವಾಮಿಗಳಿಗೆ ಫಲ ಪುಷ್ಪ ನೀಡಿ ವಂದಿಸಿದರು.

ಇದೇ ವೇಳೆ ನಾಮಧಾರಿ ಸಮಾಜದಲ್ಲಿ ವಿವಿಧ ವಿಭಾಗದಲ್ಲಿ ಕಾರ್ಯ ಮಾಡಿದ ಸಾಧಕರಿಗೆ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳು ಸನ್ಮಾನಿಸಿ ಮಂತ್ರಾಕ್ಷತೆ ನೀಡಿದರು.

ಶ್ರೀಧರ ನಾಯ್ಕ ಆಸರಕೇರಿ ಸ್ವಾಗತಿಸಿದರು. ನಾಮಧಾರಿ ಸಮಾಜದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ರಾಜೇಶ ನಾಯ್ಕ ಮಂಡಿಸಿದರು. ಗಂಗಾಧರ ನಾಯ್ಕ, ನಾರಾಯಣ ನಾಯ್ಕ ಹಾಗೂ ಮಂಜುನಾಥ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಕೆ.ಆರ್.ನಾಯ್ಕ ವಂದಿಸಿದರು.

ಈ ಸಂದರ್ಭದಲ್ಲಿ ನಾಮಧಾರಿ ಸಮಾಜದ ಪ್ರಮುಖರಾದ ಜೆ.ಎನ್.ನಾಯ್ಕ, ಡಿ.ಬಿ.ನಾಯ್ಕ, ಗೋವಿಂದ ನಾಯ್ಕ, ಕ್ರಷ್ಣ ನಾಯ್ಕ ಆಸರಕೇರಿ ಸೇರಿದಂತೆ 18 ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News