ಫೆ.29-ಮಾ.1: ದ.ಕ.ಜಿಲ್ಲಾಡಳಿತದಿಂದ ಅಸೈಗೋಳಿಯಲ್ಲಿ ಅಬ್ಬಕ್ಕ ಉತ್ಸವ

Update: 2020-02-01 18:07 GMT

ಮಂಗಳೂರು, ಫೆ.1: ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವವು ಫೆ.29 ಮತ್ತು ಮಾ.1ರಂದು ಅಸೈಗೋಳಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮಾತನಾಡಿ, ಅಬ್ಬಕ್ಕ ಉತ್ಸವದ ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕು. ಅಬ್ಬಕ್ಕ ರಾಣಿಯ ಸಾಧನೆಗಳು ಹಾಗೂ ಅಬ್ಬಕ್ಕ ಹೋರಾಟದ ಉದ್ದೇಶಗಳು ಈ ಉತ್ಸವದ ಮೂಲಕ ರಾಜ್ಯದ ಮೂಲೆಮೂಲೆಗಳಿಗೂ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದರು.

ಉದ್ಘಾಟನಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಧಾನ ವೇದಿಕೆಯಲ್ಲಿ ನಡೆಸಲಾಗುವುದು. ಕವಿಗೋಷ್ಠಿ, ಚರ್ಚಾಗೋಷ್ಠಿಗಳನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಸಲು ಚಿಂತಿಸಲಾಗಿದೆ. ಅಬ್ಬಕ್ಕ ರಾಣಿಯ ಸಾಧನೆ, ಹೋರಾಟಗಳನ್ನು ತಳಮಟ್ಟಕ್ಕೆ ಪಸರಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಾಹಿತ್ಯಿಕ ಸ್ಪರ್ಧೆಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ನಡೆಸಲಾಗವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಅಬ್ಬಕ್ಕ ಉತ್ಸವವನ್ನು ಸ್ಥಳೀಯರ ಸಹಕಾರದೊಂದಿಗೆ ಜಿಲ್ಲಾಡಳಿತವೇ ನಡೆಸಲಿದೆ. ಉತ್ಸವ ಸಂಬಂಧ ವಿವಿಧ ಸಮಿತಿಗಳಲ್ಲಿ ಸ್ಥಳೀಯರನ್ನು ತೊಡಗಿಸಿಕೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ರೂಪಾ ತಿಳಿಸಿದರು.

ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಮಾತನಾಡಿ, ಅಸೈಗೋಳಿಯ ಪಕ್ಕದಲ್ಲಿರುವ ಮಂಗಳೂರು ವಿವಿ ಆವರಣದಲ್ಲಿ ಅಬ್ಬಕ್ಕ ಉತ್ಸವ ನಡೆಸುವುದು ಸೂಕ್ತವಾಗಿದೆ. ಅಲ್ಲಿ ಅಬ್ಬಕ್ಕ ಪೀಠ ಕೂಡಾ ಇರುವುದರಿಂದ ಅಲ್ಲಿಯೇ ಉತ್ಸವ ನಡೆಸಿದರೆ ಹೆಚ್ಚು ಅರ್ಥಪೂರ್ಣವಾಗಲಿದೆ ಎಂದರು.

ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ ತೊಕ್ಕೊಟಿನಲ್ಲಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಜಮೀನು ಕಾದಿರಿಸಿ, ಅನುದಾನ ಬಿಡುಗಡೆ ಯಾಗಿದೆ. ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಅಬ್ಬಕ್ಕ ಭವನ ನಿರ್ಮಾಣ ಕಾಮಗಾರಿಯನ್ನು ಕರ್ನಾಟಕ ಗೃಹ ಮಂಡಳಿಗೆ ವಹಿಸಲಾಗಿದ್ದು, ಶೀಘ್ರವೇ ಕೆಲಸ ಪ್ರಾರಂಭವಾಗಲಿದೆ ಎಂದರು.

ಸಭೆಯಲ್ಲಿ ಮಂಗಳೂರು ಉಪ ವಿಭಾಗಾಧಿಕಾರಿ ಮದನ್ ಮೋಹನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News