×
Ad

ಆರೋಪಿಯನ್ನು ಬಂಧಿಸದಿದ್ದರೆ ಫೆ.7ರಿಂದ ಉಪವಾಸ ಸತ್ಯಾಗ್ರಹ: ಕುಟುಂಬದ ಎಚ್ಚರಿಕೆ

Update: 2020-02-03 17:08 IST

ಉಡುಪಿ, ಫೆ. 3: ಒಂದು ವರ್ಷದ ಹಿಂದೆ ಮಣೂರು ಗ್ರಾಮದ ಚಿಕ್ಕನಕೆರೆ ಎಂಬಲ್ಲಿ ನಡೆದ ಭರತ್ ಹಾಗೂ ಯತೀಶ್ ಜೋಡಿ ಕೊಲೆ ಪ್ರಕರಣದ ಆರೋಪಿ, ಉಡುಪಿ ಜಿಪಂ ಕೋಟ ಕ್ಷೇತ್ರ ಬಿಜೆಪಿ ಸದಸ್ಯ ರಾಘವೇಂದ್ರ ಕಾಂಚನ್ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ 15 ದಿನಗಳಾದರೂ ರಾಜಕೀಯ ಒತ್ತಡದಿಂದ ಆರೋಪಿಯನ್ನು ಪೊಲೀಸರು ಈವರೆಗೆ ಬಂಧಿಸಿಲ್ಲ ಎಂದು ಮೃತ ಭರತ್ ಸಹೋದರ ಹೇಮಂತ್ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಒಟ್ಟು 18 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅದರಲ್ಲಿ ರಾಘವೇಂದ್ರ ಕಾಂಚನ್ ಸಹಿತ ಕೆಲವರು ಜಾಮೀನಿನಲ್ಲಿ ಬಿಡುಗಡೆ ಹೊಂದಿದ್ದರು. ರಾಘವೇಂದ್ರ ಕಾಂಚನ್‌ಗೆ ಹೈಕೋರ್ಟ್ ನೀಡಿದ ಜಾಮೀನು ಪ್ರಶ್ನಿಸಿ ತಾಯಿ ಪಾವರ್ತಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ್ದ ಸುಪ್ರೀಂ ಕೋರ್ಟ್ ಜ.20ರಂದು ಆರೋಪಿಯ ಜಾಮೀನು ವಜಾ ಗೊಳಿಸಿ ತಕ್ಷಣವೇ ಬಂಧಿಸುವಂತೆ ಸೂಚಿಸಿತು ಎಂದರು.

ಈ ಕುರಿತು ಎಸ್ಪಿಯವರಿಗೆ ಎಲ್ಲ ದಾಖಲಾತಿಯನ್ನು ಸಲ್ಲಿಸಿದರೂ ಆರೋಪಿ ಯನ್ನು ಈವರೆಗೆ ಬಂಧಿಸಿಲ್ಲ. ಆರೋಪಿ ಪರವಾಗಿ ಕುಂದಾಪುರದ ಸ್ಥಳೀಯ ರಾಜಕಾರಣಿಗಳು ಪೊಲೀಸ್ ಇಲಾಖೆಗೆ ಒತ್ತಡ ತರುತ್ತಿದ್ದು, ಇದೇ ಕಾರಣಕ್ಕೆ ಪೊಲೀಸರು ಆರೋಪಿಯನ್ನು ಈವರೆಗೆ ಬಂಧಿಸಿಲ್ಲ. ಅಲ್ಲದೆ ಇದೇ ರಾಜ ಕಾರಣಿಗಳು ಆರೋಪಿ ಬಂಧನಕ್ಕೆ ಮುಂದಾಗಿರುವ ಕೋಟ ಎಸ್ಸೈ ವರ್ಗಾ ವಣೆಗೂ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಅವರು ದೂರಿದರು.

ಮೂರು ದಿನಗಳೊಳಗೆ ಆರೋಪಿಯನ್ನು ಬಂಧಿಸದಿದ್ದರೆ ಫೆ.7ರಿಂದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಮುಂದೆ ತಾಯಿ ಸೇರಿದಂತೆ ನಾವೆಲ್ಲ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಅದೇ ರೀತಿ ಪೊಲೀಸ್ ಇಲಾಖೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ದೂರು ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಈ ಪ್ರಕರಣದಲ್ಲಿ ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಉಳಿದ ಆರೋಪಿಗಳ ವಿರುದ್ಧ ಕೂಡ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಭರತ್ ತಾಯಿ ಪಾರ್ವತಿ, ಮೃತ ಮನೋಜ್ ಸಹೋದರರಾದ ಕಾಂಚನ್, ಅಣ್ಣಪ್ಪ, ಅತ್ತಿಗೆ ಮಾಲಿನಿ ಉಪಸ್ಥಿತರಿದ್ದರು.

‘ಸಾಲ ಮಾಡಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದ್ದು’

‘ನಮ್ಮ ಕುಟುಂಬ ತೀರಾ ಬಡತನದಲ್ಲಿ ಬದುಕು ಸಾಗಿಸುತ್ತಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ಸಾಲ ಮಾಡಿಕೊಂಡು ಆರೋಪಿಯ ಜಾಮೀನು ವಜಾಗೊಳಿಸಲು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು ಎಂದು ಭರತ್ ಸಹೋದರ ಹೇಮಂತ್ ತಿಳಿಸಿದರು.

ಕುಂದಾಪುರದ ನ್ಯಾಯವಾದಿ ಕೋತ್ತಾಡಿ ಚಂದ್ರಶೇಖರ್ ಶೆಟ್ಟಿ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಲು ಮತ್ತು ಬೆಂಗಳೂರು ಮೂಲದ ನ್ಯಾಯವಾದಿ ಚಂದ್ರಶೇಖರ್ ಪಾಟೀಲ ಹಾಗೂ ಅವರ ಪತ್ನಿ ರೇಖಾ ಚಂದ್ರ ಶೇಖರ್ ಸುಪ್ರೀಂ ಕೋರ್ಟ್‌ನಲ್ಲಿ ನಮ್ಮ ಪರವಾಗಿ ವಾದ ಮಂಡಿಸುವ ಮೂಲಕ ಸಹಕಾರ ನೀಡಿದರು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News