ಹಿರಿಯಡ್ಕ ಬಳಿ ಬಸ್- ಕಾರು ಢಿಕ್ಕಿ: ಕಾರು ಚಾಲಕ ಮೃತ್ಯು
Update: 2020-02-03 19:34 IST
ಹಿರಿಯಡ್ಕ, ಫೆ. 3: ಬೊಮ್ಮರಬೆಟ್ಟು ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿ ಸೋಮವಾರ ಮಧ್ಯಾಹ್ನ ಬಸ್ ಮತ್ತು ಕಾರಿನ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಕಾರ್ಕಳ ಕುಕ್ಕುಂದೂರಿನ ಕೆ.ಕೃಷ್ಣ ಪೈ (62) ಎಂದು ಗುರುತಿಸಲಾಗಿದೆ.
ಇವರು ಕಾರಿನಲ್ಲಿ ಕಾರ್ಕಳದಿಂದ ಮಣಿಪಾಲ ಕಡೆ ಹೋಗುತ್ತಿದ್ದಾಗ ಎದುರಿನಲ್ಲಿ ಬರುತ್ತಿದ್ದ ಖಾಸಗಿ ಬಸ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಕಾರು ಬಸ್ಸಿನ ಮುಂದಿನ ಭಾಗದ ಒಳ ಹೊಕ್ಕಿ ಜಖಂಗೊಂಡಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡ ಕೃಷ್ಣ ಪೈ ಸ್ಥಳದಲ್ಲೇ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.
ಕಾರು ಸಂಪೂರ್ಣ ನುಜ್ಜುಗುಜ್ಜಾದ ಪರಿಣಾಮ ಮೃತ ದೇಹ ಹೊರ ತೆಗೆಯಲು ಸುಮಾರು ಅರ್ಧ ತಾಸು ಹರಸಾಹಸ ಪಡಲಾಯಿತು. ಇವರ ಓರ್ವ ಮಗ ಮೂಡಬಿದ್ರೆ ಆಳ್ವಾಸ್‌ನಲ್ಲಿ ಪ್ರಾಧ್ಯಾಪಕರಾಗಿದ್ದು, ಮತ್ತೋರ್ವ ಆಸ್ಟ್ರೇಲಿಯಾದಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.