ಉಡುಪಿ ಮಹಿಳಾ ಎಎಸ್ಸೈಗೆ ಪೊಲೀಸ್ ಠಾಣೆಯಲ್ಲೇ ಹಲ್ಲೆ !
ಉಡುಪಿ : ಉಡುಪಿ ಮಹಿಳಾ ಪೊಲೀಸ್ ಠಾಣೆಯ ಎಎಸ್ಸೈ ಮುಕ್ತ ಬಾಯಿ ಎಂಬವರಿಗೆ ಮಹಿಳೆಯೊಬ್ಬರು ಸೋಮವಾರ ಬೆಳಗ್ಗೆ 11.30ರ ವೇಳೆ ಠಾಣೆಗೆ ಬಂದು ಕೆನ್ನೆಗೆ ಹೊಡೆದು, ದೂಡಿ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಹಿಳಾ ಎಎಸ್ಸೈ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಕ್ತ ಬಾಯಿ, ಫೆ.3ರಂದು ನಾಲ್ಕು ದಿನಗಳ ರಜೆಯನ್ನು ಮುಗಿಸಿ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ವೇಳೆ ಠಾಣೆಗೆ ಆಗಮಿಸಿದ ಕೊಡಂಕೂರಿನ ಉಷಾ ನಾಯ್ಕ್ ಎಂಬಾಕೆ ಮುಕ್ತ ಬಾಯಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದರೆನ್ನಲಾಗಿದ್ದು ಇದನ್ನು ಪ್ರಶ್ನಿಸಿದ ಮುಕ್ತ ಬಾಯಿಯನ್ನು ದೂಡಿ ಹಾಕಿದ ಉಷಾ ನಾಯ್ಕ್, ಕೈಯಿಂದ ಕೆನ್ನೆಗೆ ಹೊಡೆದು ಬೆದರಿಕೆ ಹಾಕಿದರೆಂದು ದೂರಲಾಗಿದೆ. ಅಲ್ಲದೆ ಉಷಾ ನಾಯ್ಕ್ ಇತರ ಸಂದರ್ಶಕರ ಎದುರು ಗಲಾಟೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಮುಕ್ತ ಬಾಯಿ ದೂರಿನಲ್ಲಿ ತಿಳಿಸಿದ್ದಾರೆ.