ಮರಳು ದಿಬ್ಬಗಳ ತೆರವು ಅವಧಿ ಮುಕ್ತಾಯ : ಹೊಸ ಪರವಾನಿಗೆಗೆ ಪ್ರಕ್ರಿಯೆ ಚಾಲನೆಯಲ್ಲಿ
ಉಡುಪಿ, ಫೆ.3: ಕರಾವಳಿ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ (ಕೆಎಸ್‌ಸಿಝಡ್‌ಎಂಎ) ದಿಂದ 2019ರ ಫೆ.4ರಂದು ನೀಡಲಾದ ನಿರಾಕ್ಷೇಪಣಾ ಪತ್ರದಂತೆ ಉಡುಪಿ ಜಿಲ್ಲಾ ವ್ಯಾಪ್ತಿಯ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ಪ್ರದೇಶದಲ್ಲಿನ ಮರಳು ದಿಬ್ಬಗಳನ್ನು ತೆರವು ಗೊಳಿಸಲಾಗಿದ್ದು, ಫೆ.3ರಂದು ಮರಳು ದಿಬ್ಬಗಳನ್ನು ತೆರವುಗೊಳಿಸಲು ನೀಡಿರುವ ಪರವಾನಿಗೆ ಅವಧಿ ಮುಕ್ತಾಯಗೊಂಡಿದೆ. ಜಿಲ್ಲೆಯ 170 ಪರವಾನಿಗೆದಾರರಿಗೆ ನಿರಾಪೇಕ್ಷಣಾ ಪತ್ರವನ್ನು ನೀಡಲಾಗಿತ್ತು.
ಈಗಾಗಲೇ ಉಡುಪಿ ಜಿಲ್ಲಾ ವ್ಯಾಪ್ತಿಯ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ 10 ಮರಳು ದಿಬ್ಬಗಳನ್ನು (ಸ್ವರ್ಣಾ ನದಿಯಲ್ಲಿ 6, ಸೀತಾ ನದಿಯಲ್ಲಿ ಮೂರು, ಪಾಪನಾಶಿನಿ 1) ಗುರುತಿಸಲಾಗಿದ್ದು, ಇವುಗಳನ್ನು ಅನುಮೋದನೆಗಾಗಿ ಕೆಎಸ್‌ಸಿಝಡ್‌ಎಂಎಗೆ ಕಳುಹಿಸಲಾಗಿದೆ. ಕೆಎಸ್‌ಸಿ ಝಡ್‌ಎಂಎ ಪ್ರಾದೇಶಿಕ ನಿರ್ದೇಶಕರಿಂದ ಅನುಮೋದನೆ ದೊರೆತ ನಂತರ ನಿಯಮಾನುಸಾರ ಮರಳು ತೆರವಿಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಪ್ರಸ್ತುತ ಮರಳು ದಿಬ್ಬಗಳನ್ನು ತೆರವುಗೊಳಿಸುವ ಕಾರ್ಯ ಸ್ಥಗಿತ ಗೊಂಡಿರುವುದರಿಂದ ಕರಾವಳಿ ನಿಯಂತ್ರಣ ವಲಯ ಪ್ರದೇಶದ ವ್ಯಾಪ್ತಿಯಲ್ಲಿ ಉಡುಪಿ ಇ-ಸ್ಯಾಂಡ್ ಆ್ಯಪ್ (Udupi e-Sand APP) ಮುಖಾಂತರ ಮರಳು ಪೂರೈಕೆ ಮಾಡಲು ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.