ಆತ್ಮಾನಂದ, ನೆಮ್ಮದಿ, ಸಾರ್ಥಕತೆ ಸಿಗುವುದು ಕಲೆ, ಸಾಹಿತ್ಯಗಳಿಂದ: ಕವಿ ಬಿ.ಆರ್.ಲಕ್ಷ್ಮಣ್‌ ರಾವ್

Update: 2020-02-03 14:52 GMT

ಹಿರಿಯಡಕ, ಫೆ.3: ಮನುಷ್ಯನಿಗೆ ನಿಜವಾದ ಸಂತೋಷ, ಆತ್ಮಾನಂದ, ನೆಮ್ಮದಿ, ಧನ್ಯತಾಭಾವ ಹಾಗೂ ಸಾರ್ಥಕತೆ ಸಿಗುವುದು ಕಲೆಗಳಿಂದ ಹಾಗೂ ಸಾಹಿತ್ಯದಿಂದ ಎಂದು ಕನ್ನಡದ ಖ್ಯಾತ ಕವಿ ಬಿ.ಆರ್.ಲಕ್ಷ್ಮಣ್‌ರಾವ್ ಅಭಿಪ್ರಾಯ ಪಟ್ಟಿದ್ದಾರೆ.

ಅಮೋಘ ಹಿರಿಯಡಕ ಹಾಗೂ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಕನ್ನಡದ ಪ್ರೇಮ ಕವಿ ಎಂದೇ ಖ್ಯಾತರಾದ ಬಿ.ಆರ್.ಲಕ್ಷ್ಮಣ್‌ರಾವ್ ಅವರ ಉಪಸ್ಥಿತಿಯಲ್ಲಿ ನಡೆದ ಕಾವ್ಯ-ಗಾನ-ಕುಂಚ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅವರೊಂದಿಗೆ ನಡೆಸಿದ ಆತ್ಮೀಯ ಸಂವಾದದ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬಿ.ಆರ್.ಲಕ್ಷ್ಮಣ್ ರಾವ್, ಪ್ರತಿಯೊಬ್ಬ ಮನುಷ್ಯನಿಗೂ ಹೊರಬಾಳು ಮತ್ತು ಒಳಬಾಳು ಎಂಬುದಿರುತ್ತೆ. ಹೊರಬಾಳಿಗೆ ಉದ್ಯೋಗ, ಸಂಪಾದನೆ, ಮನೆ, ಆಸ್ತಿ-ಪಾಸ್ತಿ ಮೊದಲಾದವು ಮುಖ್ಯವಾಗುತ್ತವೆ. ಕೇವಲ ಇದರಿಂದಷ್ಟೇ ವ್ಯಕ್ತಿ ಸಂತೋಷ ಪಡೆಯಲು ಸಾಧ್ಯವಿಲ್ಲ ಎಂದರು.

ಮನುಷ್ಯನಿಗೆ ನಿಜವಾದ ಸಂತೋಷ, ಆತ್ಮಾನಂದ, ನೆಮ್ಮದಿ ಹಾಗೂ ಸಾರ್ಥಕತೆ ಸಿಗುವುದು ಒಳಬಾಳು ಆದ ಕಲೆಗಳಿಂದ ಹಾಗೂ ಸಾಹಿತ್ಯ ದಿಂದ. ನಾಗರಿಕತೆ ಹೊರಗಿನದು, ಸಂಸ್ಕೃತಿ ಒಳಗಿನದು ಎಂದರು.

ಬೇರೆಲ್ಲಾ ಉದ್ಯೋಗ ಬಿಟ್ಟು, ವ್ರತ ತೊಟ್ಟು, ಹಗಲಿರುಳು ಕನ್ನಡ ಸಾಹಿತ್ಯ ಓದಿದ್ದಕ್ಕೆ, ಕನ್ನಡದಲ್ಲಿ ಕಾವ್ಯ ಬರೆದದ್ದಕ್ಕೆ, ನನಗೆ ಸಿಕ್ಕ ಜೋಡಿ ಪದಕ, ಈ ಕನ್ನಡಕ ಎಂಬ ತಮ್ಮ ಹನಿಗವನವನ್ನು ವಾಚಿಸಿದರು. ಅನಂತರ ಕನ್ನಡದ ಹಿರಿಯ ಕವಿ, ಸಭಿಕರೊಂದಿಗೆ ಆತ್ಮೀಯ ಸಂವಾದ ನಡೆಸಿದರು.

ಬೇರೆಲ್ಲಾ ಉದ್ಯೋಗ ಬಿಟ್ಟು, ವ್ರತ ತೊಟ್ಟು, ಹಗಲಿರುಳು ಕನ್ನಡ ಸಾಹಿತ್ಯ ಓದಿದ್ದಕ್ಕೆ, ಕನ್ನಡದಲ್ಲಿ ಕಾವ್ಯ ಬರೆದದ್ದಕ್ಕೆ, ನನಗೆ ಸಿಕ್ಕ ಜೋಡಿ ಪದಕ, ಈ ಕನ್ನಡಕ ಎಂಬ ತಮ್ಮ ಹನಿಗವನವನ್ನು ವಾಚಿಸಿದರು. ಅನಂತರ ಕನ್ನಡದ ಹಿರಿಯ ಕವಿ, ಸಭಿಕರೊಂದಿಗೆ ಆತ್ಮೀಯ ಸಂವಾದ ನಡೆಸಿದರು. ‘ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು...’ ಗೀತೆಯ ಒಳಾರ್ಥವೇನು ಎಂಬ ಪ್ರಶ್ನೆಗೆ ತಾಯಿ-ಭೂಮಿ ತಾಯಿ ಸಮೀಕರಣ ಈ ಕವಿತೆಯಲ್ಲಿದೆ ಎಂದುತ್ತರಿಸಿದರು. ಈ ಇಳಿವಯಸ್ಸಿನಲ್ಲಿ ತಮ್ಮ ಉತ್ಸಾಹದ ಗುಟ್ಟೇನು ಎಂಬ ಮತ್ತೊಂದು ಪ್ರಶ್ನೆಗೆ ಶಿಕ್ಷಕ ನಾಗಿರುವುದೇ ನನ್ನ ಉತ್ಸಾಹದ ಗುಟ್ಟು, ಯುವಕರೊಂದಿಗಿದ್ದು, ಯುವಕನಾಗಿದ್ದೇನೆ. ಶಿಕ್ಷಕರಿಗೆ ವಯಸ್ಸಾಗುವುದೇ ಇಲ್ಲ ಎಂದರು.

ನಿವೃತ್ತ ಉಪನ್ಯಾಸಕ ಸಜಂಗದ್ದೆ ರಾಮ ಭಟ್, ಕನ್ನಡ ಉಪನ್ಯಾಸಕಿ ನಳಿನಿ, ಇತಿಹಾಸ ಉಪನ್ಯಾಸಕ ಮಂಜುನಾಥ್ ಬಿ.ಡಿ., ವಿದ್ಯಾರ್ಥಿ ಗಳಾದ ಪ್ರಜ್ಞಾ, ವೆಂಕಟೇಶ್ ನಾಯಕ್, ವಿಶ್ವನಾಥ್ ಹಾಗೂ ಅಮೋಘದ ಸದಸ್ಯರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಅಮೋಘ ಹಿರಿಯಡಕದ ಕಾರ್ಯದರ್ಶಿ ಸತ್ಯಾನಂದ ನಾಯಕ್, ಅನಿಲ್ ಶೆಟ್ಟಿ, ಬೊಮ್ಮರಬೆಟ್ಟು ಗ್ರಾಪಂ ಉಪಾಧ್ಯಕ್ಷ ಹರೀಶ್ ಸಾಲ್ಯಾನ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ನಿಕೇತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಮೋಘ ಹಿರಿಯಡಕದ ನಿರ್ದೇಶಕಿ ಪೂರ್ಣಿಮಾ ಸುರೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕನ್ನಡ ಉಪನ್ಯಾಸಕ ರವಿಚಂದ್ರ ಬಾಯಿರಿ, ವಿದ್ಯಾರ್ಥಿನಿ ಅನನ್ಯ, ಕವಿ ಬಿ.ಆರ್.ಲಕ್ಷ್ಮಣ್‌ರಾವ್ ಅವರ ಕವಿತೆಗಳನ್ನು ಹಾಡಿದರು. ಕವಿಯ ಭಾವಚಿತ್ರ ವಿದ್ಯಾರ್ಥಿ ಶರಣಬಸವನ ಕುಂಚದಲ್ಲಿ ಮೂಡಿತು. ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಸುಜಯಾ ಕೆ.ಎಸ್. ಕವಿಯನ್ನು ಪರಿಚಯಿ ಸಿದರು. ಆಂಗ್ಲ ಭಾಷಾ ಸಹಾಯಕ ಪ್ರಾಧ್ಯಾಪಕ ಪ್ರವೀಣ ಶೆಟ್ಟಿ ಸ್ವಾಗತಿಸಿದರು. ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಸುಮನಾ ಬಿ. ನಿರೂಪಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ರಾಘವೇಂದ್ರ ಪಿ.ಕೆ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News