×
Ad

ಗಾಯಕ ಗಜಾನನ ಹೆಬ್ಬಾರ್‌ಗೆ ಉಪ್ಪಿನಕುದ್ರು ಕೊಗ್ಗ ಕಾಮತ್ ಪ್ರಶಸ್ತಿ

Update: 2020-02-03 20:34 IST

ಕುಂದಾಪುರ, ಫೆ.3: ಕರಾವಳಿಯ ವಿಶಿಷ್ಟ ಪರಂಪರೆಯ ಉಪ್ಪಿನಕುದ್ರು ಯಕ್ಷಗಾನ ಗೊಂಬೆಯಾಟ ರಂಗಭೂಮಿಯ ಹರಿಕಾರ ಕೊಗ್ಗ ದೇವಣ್ಣ ಕಾಮತ್ ಹೆಸರಿನಲ್ಲಿ ನೀಡುವ 2019-20ನೇ ಸಾಲಿನ ಪ್ರಶಸ್ತಿಗೆ ಖ್ಯಾತ ಹಿಂದೂಸ್ಥಾನಿ ಗಾಯಕ ವಿದ್ವಾನ್ ಗಜಾನನ ಹೆಬ್ಬಾರ್ ಅವರನ್ನು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಸಮಿತಿ ಆಯ್ಕೆ ಮಾಡಿದೆ.

ಭಟ್ಕಳದ ಶೂಲಕಂಠ ಗ್ರಾಮದ ಶಂಭು ಹೆಬ್ಬಾರ್ ಹಾಗೂ ಲಕ್ಷ್ಮೀ ಹಬ್ಬಾರ್ ಪುತ್ರನಾಗಿ 1979ರಲ್ಲಿ ಜನಿಸಿದ ಗಜಾನನ ಹೆಬ್ಬಾರ್ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ಮುದ್ದೇಬಿಹಾಳದಲ್ಲಿ ಪಡೆದರು. ಶಾಲಾ ದಿನಗಳಲ್ಲಿ ಸಂಗೀತದಲ್ಲಿ ಆಸಕ್ತಿ ಹೊಂದಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುತಿದ್ದ ಗಜಾನನ ಆಸಕ್ತಿಯನ್ನು ಗಮನಿಸಿದ ಶಾಲೆಯ ಶಿಕ್ಷಕ ಹೋಕ್ರಾಣಿ ಮಾಸ್ತರರು ಶಾಸ್ತ್ರೀಯ ಸಂಗೀತ ಕಲಿಯಲು ಪ್ರೇರೇಪಿಸಿದರು.

ಬಳಿಕ ತಮ್ಮ ಹುಟ್ಟೂರಿಗೆ ಬಂದು 15ರ ಪ್ರಾಯದಿಂದ ಸಂಗೀತಾಬ್ಯಾಸವನ್ನು ಪ್ರಾರಂಭಿಸಿದರು. ಅವರ ಮೊದಲ ಸಂಗೀತ ಗುರುಗಳು ಸಂಬಂಧಿಕರಾದ ಅನಂತ ಹೆಬ್ಬಾರ್. ನಂತರ ಹೊನ್ನಾವರ ಎಸ್.ಡಿ.ಎಂ. ಕಾಲೇಜಿನ ಸಂಗೀತ ಪ್ರಾಧ್ಯಾಪಕ ಡಾ.ಅಶೋಕ ಹುಗ್ಗಣ್ಣವರ ಇವರಲ್ಲಿ ಐದು ವರ್ಷ ಸಂಗೀತಾಬ್ಯಾಸ ನಡೆಸಿದರು. ಅದೇ ವೇಳೆ ಮುಂಬಯಿಯಿಂದ ಬಂದು ಹೊನ್ನಾವರದಲ್ಲಿ ನೆಲೆಸಿದ್ದ ನಾರಾಯಣ ಪಂಡಿತ್‌ರಿಂದ ಹೆಚ್ಚಿನ ಸಂಗೀತ ಕಲಿತು ಉತ್ತಮ ಶಾಸ್ತ್ರೀಯ ಸಂಗೀತ ಕಲಾವಿದರಾಗಿ ಮೂಡಿಬಂದರು.

 ಈ ಮಧ್ಯೆ ಸಂಗೀತದಲ್ಲಿ ವಿರಳವಾಗುತ್ತಿರುವ ಸಾರಂಗಿ ವಾದನವನ್ನು ಜಿ.ಎಸ್.ಹೆಗಡೆ,ಬೆಳ್ಳೆಕೇರಿ ಇವರಲ್ಲಿ ಪ್ರಾಥಮಿಕವಾಗಿ ಕಲಿತು ನಂತರ ಬೆಂಗಳೂರಿನ ಉಸ್ತಾದ್ ಫಯಾಜ್ ಖಾನ್‌ರಲ್ಲಿ ಮುಂದುವರಿಸಿದರು. ಕುಮಾರ್‌ಜೀ ಅವರ ಗಾಯನ ಶೈಲಿಯನ್ನು ರೂಡಿಸಿಕೊಂಡು ತಮ್ಮದೇ ಹೊಸ ಶೈಲಿಯಲ್ಲಿ ಗಾಯನ ಪ್ರಸ್ತುತ ಪಡಿಸುವ ಗಜಾನನ ಹೆಬ್ಬಾರ್ ಗಾಯನದಲ್ಲಿ ಖ್ಯಾಲ್ ಗಾಯಕಿ, ಠುಮರಿ, ಠಪ್ಪ, ಹೋಲಿಗೀತ್, ಭಜನ್, ಭಾವಗೀತೆ ವಿಶೇಷವಾಗಿ ನಿರ್ಗುಣಿ ಭಜನ್‌ಗಳನ್ನು ಕರಗತಗೊಳಿಸಿಕೊಂಡಿದ್ದಾರೆ.

ಪ್ರಸ್ತುತ ಹೊನ್ನಾವರ, ಭಟ್ಕಳ ಹಾಗೂ ಕುಂದಾಪುರಗಳಲ್ಲಿ ಸಂಗೀತವನ್ನು ಬೋಧಿಸುತಿದ್ದಾರೆ. ಕಳೆದ ಹನ್ನೊಂದು ವರ್ಷಗಳಿಂದ ಕುಂದಾಪುರದಲ್ಲಿ ಸಾಧನ ಸಂಸ್ಥೆಯಲ್ಲಿ ಗುರುಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಹೇಳುತಿದ್ದಾರೆ.

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಐದನೇ ವಾರ್ಷಿಕೋತ್ಸವ ಮುಂದಿನ ಎಪ್ರಿಲ್ 12ರಂದು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News