ರಕ್ಷಣಾತ್ಮಕ ವೈದ್ಯಕೀಯ ಉಪಕರಣಗಳ ತುರ್ತು ಅಗತ್ಯ: ಚೀನಾ
ಬೀಜಿಂಗ್, ಫೆ. 3: ಚೀನಾದಲ್ಲಿ ಕೊರೋನವೈರಸ್ ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳುತ್ತಿರುವಂತೆಯೇ, ತನಗೆ ತುರ್ತಾಗಿ ರಕ್ಷಣಾತ್ಮಕ ವೈದ್ಯಕೀಯ ಉಪಕರಣಗಳು ಬೇಕಾಗಿವೆ ಎಂದು ಅದು ಹೇಳಿದೆ.
ವೈರಸ್ ಸೋಂಕು ಹರಡುವಿಕೆಯ ಭೀತಿಯಲ್ಲಿ, 140 ಕೋಟಿ ಜನಸಂಖ್ಯೆಯ ಚೀನಾದ ಜನರು ಒಮ್ಮೆ ಬಳಸುವ ವೈದ್ಯಕೀಯ ಮುಖವಾಡಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಹಾಗಾಗಿ, ಸೋಂಕಿನ ಕೇಂದ್ರ ಬಿಂದು ವುಹಾನ್‌ನಲ್ಲಿ ರೊಗಿಗಳೊಂದಿಗೆ ನೇರ ಸಂಪರ್ಕದಲ್ಲಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ವೈದ್ಯಕೀಯ ಉಪಕರಣಗಳ ಕೊರತೆಯನ್ನು ಎದುರಿಸುತ್ತಿದ್ದಾರೆ.
‘‘ಚೀನಾಕ್ಕೆ ಈಗ ತುರ್ತಾಗಿ ವೈದ್ಯಕೀಯ ಮುಖವಾಡಗಳು, ರಕ್ಷಣಾ ದಿರಿಸುಗಳು ಮತ್ತು ರಕ್ಷಣಾ ಗಾಗಲ್ (ಕನ್ನಡಕ)ಗಳು ಬೇಕಾಗಿವೆ’’ ಎಂದು ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಚೀನಾದ ಕಾರ್ಖಾನೆಗಳು ಪೂರ್ಣ ಪ್ರಮಾಣದಲ್ಲಿ ನಡೆದರೆ, ದಿನವೊಂದಕ್ಕೆ ಸುಮಾರು 2 ಕೋಟಿ ಮುಖವಾಡಗಳನ್ನು ತಯಾರಿಸಬಹುದಾಗಿದೆ ಎಂದು ಕೈಗಾರಿಕಾ ಸಚಿವಾಲಯ ತಿಳಿಸಿದೆ.
ದಕ್ಷಿಣ ಕೊರಿಯ, ಜಪಾನ್, ಕಝಖ್‌ಸ್ತಾನ್ ಮತ್ತು ಹಂಗೇರಿ ದೇಶಗಳು ವೈದ್ಯಕೀಯ ಉಪಕರಣಗಳನ್ನು ದೇಣಿಗೆ ನೀಡಿವೆ ಎಂದು ವಿದೇಶ ಸಚಿವಾಲಯ ತಿಳಿಸಿದೆ.