‘ವಿಮ್’ ದ.ಕ ಜಿಲ್ಲಾ ಸಮಿತಿಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಮಂಗಳೂರು, ಫೆ.3: ವಿಮೆನ್ ಇಂಡಿಯಾ ಮೂವ್‌ಮೆಂಟ್ ದ.ಕ ಜಿಲ್ಲಾ ಸಮಿತಿ ವತಿಯಿಂದ ಸದಸ್ಯತ್ವ ಅಭಿಯಾನಕ್ಕೆ ಮಂಗಳವಾರ ನಗರದ ಕೋಸ್ಟಲ್ ಸಭಾ ಭವನದಲ್ಲಿ ಚಾಲನೆ ನೀಡಲಾಯಿತು.
ವಿಮ್ ರಾಜ್ಯ ಕಾರ್ಯದರ್ಶಿ ಆಯೇಶಾ ಬಜ್ಪೆ ಕಾರ್ಯಕ್ರಮ ಉದ್ಘಾಟಿಸಿದರು. ದ.ಕ. ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ ಮಾತನಾಡಿ ದೇಶಾದ್ಯಂತ ಮಹಿಳಾ ಹಕ್ಕುಗಳನ್ನು ಕಸಿಯುತ್ತಿರುವ ಮತ್ತು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ದಿನೇ ದಿನೇ ಹೆಚ್ಚುತ್ತಿರುವ ಈ ಸಂದರ್ಭ ಅದರ ವಿರುದ್ಧ ಮಹಿಳೆಯರು ಜಾತಿ, ಮತ ಭೇದ ಮರೆತು ಒಂದಾಗಿ ಹೋರಾಡಬೇಕೆಂದು ಕರೆ ನೀಡಿದರು.
‘ಘನತೆಯ ಸಮಾಜಕ್ಕಾಗಿ ಒಂದಾಗೋಣ’ ಎಂಬ ಘೋಷ ವಾಕ್ಯದೊಂದಿಗೆ ದೇಶಾದ್ಯಂತ ಫೆ.29ರವರೆಗೆ ಹಮ್ಮಿಕೊಂಡ ಸದಸ್ಯತ್ವ ಅಭಿಯಾನವನ್ನು ಚಳುವಳಿಯ ಭಾಗವಾಗಿ ಮಹಿಳೆಯರು ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದು ನಸ್ರಿಯಾ ಬೆಳ್ಳಾರೆ ಹೇಳಿದರು.
ವೇದಿಕೆಯಲ್ಲಿ ಸಂಘಟನೆಯ ದ.ಕ ಜಿಲ್ಲಾ ಕೋಶಾಧಿಕಾರಿ ಝುಲೈಕ ಪರ್ಲಿಯಾ, ಜಿಲ್ಲಾ ಸಮಿತಿ ಸದಸ್ಯೆ ಸಫಿಯಾ ಬೆಂಗರೆ ಉಪಸ್ಥಿತರಿದ್ದರು. ವಿಮ್ ದ.ಕ. ಜಿಲ್ಲಾ ಪ್ರದಾನ ಕಾರ್ಯದರ್ಶಿ ಝಹನಾ ಬಿ.ಸಿ.ರೋಡ್ ಪ್ರಾಸ್ತಾವಿಕವಾಗಿ ಮಾತನಾಡಿದರು.