ಭಟ್ಕಳ : ಕೋಮು ಸಾಮರಸ್ಯಕ್ಕೆ ಮಾದರಿಯಾದ ಚಿನ್ನದ ಪಳ್ಳಿ
ಭಟ್ಕಳ: ನಗರದ ಜಾಮೀಯಾ ಸ್ಟ್ರೀಟ್ ನಲ್ಲಿರುವ ಐತಿಹಾಸಿಕ ಮಸೀದಿ ಚಿನ್ನದ ಪಳ್ಳಿ ರವಿವಾರ ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಯಿತು. ಜಮಾಅತುಲ್ ಮುಸ್ಲಿಮೀನ್ ಸಂಸ್ಥೆಯ ಜಾಮಿಯಾ ಮಸೀದಿ 'ಚಿನ್ನದ ಪಳ್ಳಿ'ಯಲ್ಲಿ ನಡೆದ ಮಸೀದಿ ದರ್ಶನ ಹಿಂದೂ ಮುಸ್ಲಿಮ್ ರನ್ನು ಬೆಸೆಯುವಂತಹ ಕೇಂದ್ರವಾಗಿ ಮರ್ಪಟ್ಟಿತ್ತು. ನೂರಾರು ಮಂದಿ ಹಿಂದೂ, ಮುಸ್ಲಿಮ್ ಕ್ರೈಸ್ತರು ಮಸೀದಿ ದರ್ಶನದ ಮೂಲಕ ಒಂದು ಮಾದರಿ ಸಮಾಜ ಹೇಗಿರಬೇಕು ಎಂಬುದನ್ನು ಸಾಬೀತು ಮಾಡಿ ತೋರಿಸಿದರು.
ಈ ಸಂದರ್ಭ ಮಾತನಾಡಿದ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಹಾಗೂ ಮಾಧ್ಯಮ ಕೇಂದ್ರದ ನಿರ್ದೇಶಕ ಮುಹಮ್ಮದ್ ಯಾಸೀನ್ ಮಲ್ಪೆ, ಪ್ರವಾದಿ ಮುಹಮ್ಮದ್ ಪೈಗಂಬರರ ಕಾಲದಲ್ಲಿದ್ದ ಮಸೀದಿಯ ಸ್ವರೂಪ ಹಾಗೂ ಅವುಗಳ ಕಾರ್ಯಗಳನ್ನು ವಿವರಿಸುತ್ತ ಮಸೀದಿಗಳಿಂದ ಸಮಾಜಕ್ಕೆ ಭಾವೈಕ್ಯತೆಯ ಸಂದೇಶ ರವಾನೆಯಾಗಬೇಕು, ಅಂತಹ ಮಾದರಿ ಮಸೀದಿಯಾಗಿ ಚಿನ್ನದ ಪಳ್ಳಿ ಇಂದು ರೂಪುಗೊಂಡಿದೆ ಎಂದರು.
ಬಾಂಗ್ ಮತ್ತು ನಮಾಝ್ ಕುರಿತಂತೆ ಪತ್ರಕರ್ತ ಎಂ.ಆರ್.ಮಾನ್ವಿ ಮಾತನಾಡಿ, ಮಸೀದಿಗಳ ಕುರಿತಂತೆ ಇಂದು ಬಹುತೇಕ ಜನರಲ್ಲಿ ತಪ್ಪುಕಲ್ಪನೆಗಳಿದ್ದು ಅದನ್ನೂ ಸರಿಮಾಡುವ ಪ್ರಯತ್ನ ಹಾಗೂ ಸಮಾಜದಲ್ಲಿ ಪರಸ್ಪರನ್ನು ಅರಿಯುವಂತಹ ಕಾರ್ಯವಾಗುತ್ತಿದೆ ಎಂದರು.
ಅಲಿಮಿಯಾ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಲ್ಯಾಸ್ ನದ್ವಿ, ಮಾಜಿ ಶಾಸಕ ಜೆ.ಡಿ.ನಾಯ್ಕ, ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಕೃಷ್ಣ ಭಟ್ ಈ ಸಂದರ್ಭ ಮಾತನಾಡಿದರು.
ಹಾಫಿಝ್ ಅಶ್ಫಾಖ್ ಚೆನ್ನಾ ಕುರ್ ಆನ್ ಪಠಿಸಿದರು. ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಕಾರ್ಯದರ್ಶಿ ಮೌಲಾನ ತಲ್ಹಾ ರುಕ್ನುದ್ದೀನ್ ನದ್ವಿ ಸ್ವಾಗತಿಸಿದರು. ಅಬ್ದುಸ್ಸಮೀ ಕಾರ್ಯಕ್ರಮ ನಿರೂಪಿಸಿದರು. ಶಾಬಂದ್ರಿ ಶಫಿ ಪಟೇಲ್ ವಂದಿಸಿದರು.
ಜಮಾಅತುಲ್ ಮುಸ್ಲಿಮೀನ್ ಉಪಾಧ್ಯಕ್ಷ ಎಸ್.ಜೆ.ಹಾಶೀಂ, ಚೀಫ್ ಖಾಝಿ ಮೌಲಾನ ಮುಹಮ್ಮದ್ ಮುಲ್ಲಾ ಇಕ್ಬಾಲ್ ನದ್ವಿ, ಮೌಲಾನ ಅಬ್ದುಲ್ ಅಝೀಮ್ ಕಾಝೀಯಾ, ಮೊಗೇರ್ ಸಮಾಜದ ಕೆ.ಎಂ.ಕರ್ಕಿ ಮುಂತಾದವರು ಉಪಸ್ಥಿತರಿದ್ದರು.