ದೈವರಾಜ ಶ್ರೀ ಬಬ್ಬುಸ್ವಾಮಿಯ ಐತಿಹಾಸಿಕ ಸ್ಥಳಗಳು’ ಕೃತಿ ಬಿಡುಗಡೆ
ಮಂಗಳೂರು, ಫೆ.4: ನವೀನ್ ಸುವರ್ಣ ಪಡ್ರೆ ಬರೆದಿರುವ ‘ದೈವರಾಜ ಶ್ರೀ ಬಬ್ಬುಸ್ವಾಮಿಯ ಐತಿಹಾಸಿಕ ಸ್ಥಳಗಳು’ ಕೃತಿಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಮಂಗಳವಾರ ಬಿಡುಗಡೆಗೊಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಪಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಯುವ ಸಾಹಿತಿ ನವೀನ್ ಸುವರ್ಣ ಅವರು ತುಳುನಾಡಿನ ಕಾರಣಿಕ ದೈವವಾದ ಶ್ರೀ ಬಬ್ಬುಸ್ವಾಮಿ ದೈವದ ಐತಿಹಾಸಿಕ ಸ್ಥಳಗಳನ್ನು ಖುದ್ದಾಗಿ ಭೇಟಿ ಮಾಡಿ ಆ ಬಗ್ಗೆ ಅಧ್ಯಯನ ಮಾಡಿ ಈ ಪುಸ್ತಕವನ್ನು ರಚಿಸಿರುವುದು ಶ್ಲಾಘನೀಯ ಎಂದರು.
ವರ್ಣರಂಜಿತ ಚಿತ್ರ ಹಾಗೂ ಸಮಗ್ರ ಮಾಹಿತಿ ಹೊಂದಿರುವ ಕೃತಿ ಇದಾಗಿದ್ದು, ಕೋರ್ದಬ್ಬು ದೈವದ ಪಾಡ್ದನವನ್ನು ಮೂಲ ಆಧಾರವನ್ನಾಗಿ ಹಿಡಿದುಕೊಂಡು ಈ ಪುಸ್ತಕ ರಚನೆಯಾಗಿದೆ. ಈ ಮಾದರಿಯಲ್ಲಿ ತುಳುನಾಡಿನ ಚರಿತ್ರೆ ತಿಳಿಸುವ ಅಧ್ಯಯನ ಹೆಚ್ಚು ಹೆಚ್ಚು ಆಗಬೇಕಾಗಿದೆ ಮತ್ತು ಈ ರೀತಿಯ ಅಧ್ಯಯನವನ್ನು ನಾವೆಲ್ಲ ಪ್ರೋತ್ಸಾಹಿಸುವ ಅಗತ್ಯವಿದೆ. ತುಳುನಾಡಿನ ಕೆಲವು ಕಡೆ ಕೊರ್ದಬ್ಬು ದೈವದ ಐತಿಹಾಸಿಕ ಕುರುಹುಗಳು, ಕೆರೆಗಳು ಅವನತಿ ಅಂಚಿನಲ್ಲಿದ್ದು, ಅದನ್ನು ಉಳಿಸುವ ಕೆಲಸ ಮಾಡಬೇಕು ಎಂದರು.
ಕೃತಿ ರಚನೆಕಾರ ನವೀನ್ ಸುವರ್ಣ ಪಡ್ರೆ ಮಾತನಾಡಿ, ಇದು ನನ್ನ 8ನೇ ಕೃತಿಯಾಗಿದ್ದು, ಇದಕ್ಕೆ ಶ್ರೀ ಬಬ್ಬುಸ್ವಾಮಿ ಅಧ್ಯಯನ ಕೇಂದ್ರ ಸುರತ್ಕಲ್ ಇದರ ಯುವಕರ ಸಹಕಾರವಿದೆ. ಹಿರಿಯ ಸಂಶೋಧನಾ ಸಾಹಿತಿಗಳಾದ ವಿದ್ವಾಂಸ ಡಾ.ಅಮೃತ ಸೋಮೇಶ್ವರ ಹಾಗೂ ಹಿರಿಯ ಸಂಶೋಧನಾ ಸಾಹಿತಿಗಳಾದ ಕೆ.ಎಲ್. ಕುಂಡಂತಾಯ ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಐತಿಹಾಸಿಕ ಕುರುಹುಗಳ ಉಳಿವಿಗಾಗಿ ಸರಕಾರವು ಕ್ರಿಯಾ ಯೋಜನೆಯನ್ನು ರೂಪಿಸಬೇಕು ಎಂದು ಆಗ್ರಹಿಸಿದರು.
ದಲಿತ ಚಿಂತಕ ಸೀತಾರಾಮ್ ಸಾಲ್ಯಾನ್ ಕೋಡಿಕಲ್, ಇನ್ಫೋಸಿಸ್ ಪ್ರಾಂತೀಯ ಮ್ಯಾನೇಜರ್ ಹರೀಶ್ ಜೆ. ಕೊಲೆಕಾಡಿ, ಅತ್ತಾವರ ಕೊರ್ದಬ್ಬು ದೈವಸ್ಥಾನ ಗುರಿಕಾರ ಟಿ. ಹೊನ್ನಯ್ಯ, ರಂಗಕರ್ಮಿ ಭರತ್ ಎಸ್. ಕರ್ಕೇರ ಉಪಸ್ಥಿತರಿದ್ದರು.